ADVERTISEMENT

ಸಿಂಗಪುರ: ವಿವಾದದಲ್ಲಿ ಪ್ರಧಾನಿ ಲೂಂಗ್

ಏಜೆನ್ಸೀಸ್
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಸಿಂಗಪುರ: ವಿವಾದದಲ್ಲಿ ಪ್ರಧಾನಿ ಲೂಂಗ್
ಸಿಂಗಪುರ: ವಿವಾದದಲ್ಲಿ ಪ್ರಧಾನಿ ಲೂಂಗ್   

ಸಿಂಗಪುರ: ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತದ ಆರೋಪಕ್ಕೆ ಗುರಿಯಾಗಿರುವ ಪ್ರಧಾನಿ ಲೀ ಹೈನ್ ಲೂಂಗ್ ಸೋಮವಾರ ಸಂಸತ್ತಿಗೆ ಹಾಜರಾಗಿ, ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಹಾಗಿದ್ದೂ ಈ ಪ್ರಕರಣವು ಸಿಂಗಪುರಕ್ಕೆ ಆಘಾತವನ್ನು ತಂದೊಡ್ಡಿದೆ. ಲೂಂಗ್‌ ಅವರ ಸಹೋದರ ಮತ್ತು ಸಹೋದರಿಯೇ ಈ ಬಗೆಯ ಆರೋಪಗಳನ್ನು ಮಾಡಿದ್ದಾರೆ.

‘ನನ್ನ ಮೇಲಿನ ಆರೋಪಗಳೆಲ್ಲ ಆಧಾರರಹಿತವಾಗಿದ್ದು, ಇವು ಈಗಾಗಲೇ ಸಿಂಗಪುರವನ್ನು ಆಘಾತಕ್ಕೆ ದೂಡಿವೆ. ಸರ್ಕಾರದ ಆತ್ಮವಿಶ್ವಾಸದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಲೂಂಗ್ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ.

ಸಿಂಗಪುರದ ಮೊದಲ ಪ್ರಧಾನಿ ಲೀ ಕುನ್ ಯೆ ಅವರ ಮಕ್ಕಳಾದ ವೇಯ್ ಲಿಂಗ್ ಮತ್ತು ಹೈನ್ ಯಾಂಗ್ ಅವರು ತಮ್ಮ ಹಿರಿಯ ಸೋದರ ಲೀ ಹೈನ್ ಲೂಂಗ್ ಅವರ ಮೇಲೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆರೋಪ ಮಾಡುತ್ತಿದ್ದಾರೆ.

ADVERTISEMENT

ಕುಟುಂಬದ ಬಂಗಲೆಯೊಂದರ ಸಂಬಂಧ ಇವರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ತಮ್ಮ ನಿಧನದ ಬಳಿಕ ವ್ಯಕ್ತಿ ಆರಾಧನೆಯನ್ನು ತಡೆಯಲು ಈ ಬಂಗಲೆಯನ್ನು ನಾಶಪಡಿಸಬೇಕೆಂಬುದು, ಲೀ ಕುನ್ ಯೆ ಅವರ ಬಯಕೆಯಾಗಿತ್ತು. ಸಿಂಗಪುರವನ್ನು ವಿಶ್ವದ ಶ್ರೀಮಂತ ಸಮಾಜದಲ್ಲಿ ಒಂದಾಗಿಸಿದ ಕೀರ್ತಿ ಹೊಂದಿರುವ ಲೀ, 2015ರ ಮಾರ್ಚ್‌ನಲ್ಲಿ ನಿಧನರಾಗಿದ್ದರು.

ಈ ಬಂಗಲೆ ಕೆಡವುವ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಲೂಂಗ್‌ ಪಿತ್ರಾರ್ಜಿತ ಆಸ್ತಿಯ ದುರ್ಬಳಕೆಗೆ ಮುಂದಾಗಿದ್ದಾರೆ ಹಾಗೂ ಮುಂದೆ ತಮ್ಮ ಪುತ್ರನೇ ದೇಶದ ನಾಯಕನಾಗಬೇಕೆಂದು ಬಯಸಿದ್ದಾರೆ ಎಂಬುದು ಸಹ ಪ್ರಧಾನಿ ವಿರುದ್ಧದ ಆರೋಪಗಳಲ್ಲಿ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.