ADVERTISEMENT

ಸಿಹಿ ಸುದ್ದಿ ಏನಿದ್ದರೂ ಚುನಾವಣೆ ಬಳಿಕವೇ: ಪಾಕ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 12:51 IST
Last Updated 4 ಜನವರಿ 2014, 12:51 IST

ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ಮತ್ತು ಸಿಯಾಚಿನ್ ಸೇರಿದಂತೆ ಉಭಯ ರಾಷ್ಟ್ರಗಳ ನಡುವಣ ಮಹತ್ವದ ಸಮಸ್ಯೆಗಳ ಬಗ್ಗೆ ಭಾರತದ ಸಾರ್ವತ್ರಿಕ ಚುನಾವಣೆಯ ಬಳಿಕವೇ ಪರಿಹಾರ ನಿರೀಕ್ಷಿಸಬಹುದು ಎಂದು ಪಾಕಿಸ್ತಾನ ಪ್ರಧಾನಿ ಅವರ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ  ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ಅವರು ಶನಿವಾರ ಅಭಿಪ್ರಾಯ ಪಟ್ಟಿದ್ದಾರೆ.

ಕಾಶ್ಮೀರ, ಸರ್ ಕ್ರಿಕ್ ಮತ್ತು ಸಿಯಾಚಿನ್‌ಗಳಂತಹ ವಿಷಯಗಳಿಗೆ ಸಂಬಂಧಿಸಿದಂತೆ ಅನಧಿಕೃತ ಮಾತುಕತೆಗಳು ನಡೆಯುತ್ತಿವೆ. ಭಾರತದೊಂದಿಗಿನ ಸಂಬಂಧ ಸುಧಾರಿಸುವುದು ಪಾಕಿಸ್ತಾನದ ‘ಕಾಳಜಿ’ಯಾಗಿದೆ ಎಂದು  ಸರ್ಕಾರಿ ರೆಡಿಯೋಗೆ ಅಜೀಜ್ ಅವರು ತಿಳಿಸಿದ್ದಾರೆ.

ಭಾರತದಲ್ಲಿ ಚುನಾವಣೆ ಸಮೀಪಿಸಿರುವುದರಿಂದ ಸಂಯುಕ್ತ ಮಾತುಕತೆಗೆ ಅಡ್ಡಿಯಾಗುತ್ತಿದೆ. ಆದರೆ ವ್ಯಾಪಾರ, ಇಂಧನ ಮತ್ತು ವೀಸಾ ಆಡಳಿತಕ್ಕೆ ಸಂಬಂಧಿಸಿದಂತೆ ಮಾತುಕತೆ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಅನಧಿಕೃತ ಮಾತುಕತೆಗಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಶೇಹ್ರಯಾರ್ ಅವರನ್ನು ನೇಮಿಸಿದೆ. ಶೇಹ್ರಯಾರ್ ಅವರ ಭಾರತದ ಸಹದ್ಯೋಗಿ ಮಾಜಿ ರಾಯಭಾರಿ ಎಸ್ ಕೆ ಲಂಬಾಹ್.

ಭಾರತ ಚುನಾವಣೆ ಎದುರು ನೋಡುತ್ತಿರುವ ಸಮಯದಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಉದ್ಭವಿಸುವ ಉದ್ವಿಗ್ನತೆಯನ್ನು ತಪ್ಪಿಸಲು ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಹಾಗೂ ನಿರಂತರ ಮಾತುಕತೆ ಅಗತ್ಯವಾಗಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.