ADVERTISEMENT

ಸೌದಿ:ಉದ್ಯೋಗ ಕೈತಪ್ಪುವ ಭೀತಿಯಲ್ಲಿ ಭಾರತೀಯರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:00 IST
Last Updated 15 ಸೆಪ್ಟೆಂಬರ್ 2011, 6:00 IST

ದುಬೈ, (ಪಿಟಿಐ):ಶುಶ್ರೂಷಕರ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲು ಸೌದಿ ಅರೇಬಿಯಾ ಸರ್ಕಾರ  ನಿರ್ಧರಿಸಿದ್ದು, ಇದರಿಂದ ಭಾರತೀಯರೂ ಸೇರಿದಂತೆ ಸಾವಿರಾರು ವಿದೇಶಿ ಶುಶ್ರೂಷಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಹತ್ತು ವರ್ಷದ ಸೇವಾವಧಿ ಕರಾರು ಪೂರೈಸಿರುವ ವಿದೇಶಿ ಶುಶ್ರೂಷಕರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಸೌದಿ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ಸಚಿವಾಲಯ ಆದೇಶ ಹೊರಡಿಸಿದೆ. ಕಟ್ಟುನಿಟ್ಟಾಗಿ ಈ ಆದೇಶ ಪಾಲಿಸುವಂತೆ ಸೂಚಿಸಲಾಗಿದೆ.

ಹಂತ ಹಂತವಾಗಿ ಆದೇಶ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 300 ಸ್ಥಳೀಯ ಹಿರಿಯ ಶುಶ್ರೂಷಕರನ್ನು ನೇಮಕ ಮಾಡಿಕೊಳ್ಳಲು ಆರೋಗ್ಯ ಸಚಿವಾಲಯ ಯೋಜನೆ ರೂಪಿಸಿದೆ.

ಸೂಕ್ತ ಸ್ಥಳೀಯ ಅಭ್ಯರ್ಥಿಗಳು ದೊರೆಯುವವರೆಗೂ ತುರ್ತು ಸೇವೆ, ತುರ್ತು ನಿಗಾ ಘಟಕ ಮತ್ತು ಹಿಮೊ ಡಯಾಲಿಸಿಸ್ ಕ್ಷೇತ್ರದ ಶುಶ್ರೂಷಕರನ್ನು ಸೇವೆಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿದೇಶಿ ಶುಶ್ರೂಷಕರಿಗೂ ಇದೇ ನಿಯಮ ಅನ್ವಯಿಸುತ್ತದೆ.

ಅನೇಕ ರಾಷ್ಟ್ರಗಳಿಂದ ಉದ್ಯೋಗ ಅರಸಿಕೊಂಡು ಸೌದಿಗೆ ಬರುತ್ತಿದ್ದ ಶುಶ್ರೂಷಕರಿಗೆ ಈ ನಿರ್ಧಾರ ನಿರಾಸೆ ಮೂಡಿಸಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯ ಶೂಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರು ಸಹಜವಾಗಿಯೇ ಆತಂಕಗೊಂಡಿದ್ದಾರೆ. ಅಂಕಿ, ಅಂಶಗಳ ಪ್ರಕಾರ 1.6 ದಶಲಕ್ಷ ಭಾರತೀಯರು ಇಲ್ಲಿ ಉದ್ಯೋಗದಲ್ಲಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.