ADVERTISEMENT

ಸೌರ- ಅಣು ವಿದ್ಯುತ್ ಉತ್ಪಾದನೆ: ಬಂಡವಾಳ ಹೂಡಿಕೆಗೆ ಪ್ರಧಾನಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಸೋಲ್ (ಪಿಟಿಐ): ಭಾರತದಲ್ಲಿ ಅಣು ಸ್ಥಾವರಗಳನ್ನು ಸ್ಥಾಪಿಸಲು ದಕ್ಷಿಣ ಕೊರಿಯಾ ಉತ್ಸುಕವಾಗಿರುವ ಬೆನ್ನಲ್ಲೇ ಪ್ರಧಾನಿ ಮನಮೋಹನ್ ಸಿಂಗ್, ದೇಶದ ಅಣುಶಕ್ತಿ ವಿಸ್ತರಣಾ ಕಾರ್ಯಕ್ರಮಕ್ಕೆ ನೆರವು ನೀಡುವಂತೆ ಇಲ್ಲಿನ ಉದ್ಯಮಿಗಳನ್ನು ಕೋರಿದ್ದಾರೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣುಶಕ್ತಿ ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದ್ದಾರೆ.

ಪರಮಾಣು ಭದ್ರತೆ ಸಮಾವೇಶಕ್ಕೆ ಆಗಮಿಸಿರುವ ಪ್ರಧಾನಿ ಸಿಂಗ್ ಅವರಿಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಭಾರತದಲ್ಲಿ ಪರಮಾಣು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಾವಕಾಶ ನೀಡಲು ಕೋರಿದ್ದರು.

`ನವೀಕರಿಸಬಹುದಾದ ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ದ್ವಿಗುಣಗೊಳಿಸುವ ಗುರಿಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸೌರಶಕ್ತಿ ಮತ್ತು ಅಣು ಶಕ್ತಿಗಳ ಉತ್ಪಾದನಾ ಘಟಕ ಸ್ಥಾಪನೆಗೆ ಉತ್ತೇಜನ ನೀಡಲಾಗುವುದು~ ಎಂದು ಅವರು ದ.ಕೊರಿಯಾದ ಅಗ್ರ ಉದ್ದಿಮೆಗಳ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ತಿಳಿಸಿದ್ದಾರೆ.

`ಭಾರತದಲ್ಲಿ ಉದ್ಯಮ ವಿಸ್ತರಣೆಗೆ ಬಹಳಷ್ಟು ಅವಕಾಶಗಳಿವೆ. ಕೊರಿಯಾದವರು ಪರಿಸರ ಸ್ನೇಹಿ ತಂತ್ರಜ್ಞಾನದಲ್ಲಿ ನಿಪುಣರು ಎಂಬುದನ್ನು ನಾನು ಬಲ್ಲೆ~ ಎಂದು ದಕ್ಷಿಣ ಕೊರಿಯಾದ ವಾಣಿಜ್ಯೋದ್ಯಮ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮನಮೋಹನ್ ಸಿಂಗ್ ಹೇಳಿದರು.

ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳ ಎನ್ನುವುದನ್ನು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ, ಕೆಲವು ವರ್ಷಗಳಿಂದ ಭಾರತದ ಅಭಿವೃದ್ಧಿ ಸೂಚ್ಯಂಕವು ಶೇ 7ರಷ್ಟಿದೆ. ಇದನ್ನು ಶೇ 10ಕ್ಕೆ ಏರಿಸುವ ನಿಟ್ಟಿನಲ್ಲಿ ಕೆಲವು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದರು.

ಒಡಿಶಾದಲ್ಲಿ ಸ್ಥಳೀಯರ ವಿರೋಧದಿಂದ ಸ್ಥಗಿತವಾಗಿರುವ ಪೋಸ್ಕೊ ಯೋಜನೆಯ ಪುನರ್ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಮತ್ತೆ ಭರವಸೆ ನೀಡಿರುವ ಅವರು, ಭಾರತವನ್ನು ನಂಬಿ ಎಂದರು.

ಭೂರಿ ಭೋಜನ

(ಐಎಎನ್‌ಎಸ್ ವರದಿ):  ಸಮಾವೇಶಕ್ಕೆ ಆಗಮಿಸಿರುವ ಗಣ್ಯರ ಆತಿಥ್ಯಕ್ಕೆ ಭೂರಿ ಭೋಜನವೇ ಕಾದಿದೆ. ಪಾಶ್ಚಿಮಾತ್ಯ ಮತ್ತು ಕೊರಿಯಾ ಶೈಲಿಯ ರಸದೌಣವನ್ನು ಅತಿಥೇಯ ದಕ್ಷಿಣ ಕೊರಿಯಾ ನೀಡಲಿದೆ.  58 ವಿವಿಧ ದೇಶಗಳಿಂದ ಈ ಸಮಾವೇಶಕ್ಕೆ ಗಣ್ಯರು ಆಗಮಿಸಿದ್ದು, ಭಾಷಾ ತೊಡಕು ನಿವಾರಿಸಲು ವಿವಿಧ ದೇಶಗಳಿಂದ 51 ಭಾಷಾಂತರಕಾರರು ಆಗಮಿಸಿದ್ದಾರೆ. ಹಿಂದಿ, ಇಂಗ್ಲಿಷ್, ಚೈನಿ, ಜಪಾನಿ ಸೇರಿದಂತೆ 18 ಭಾಷೆಗಳನ್ನು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆ ಮಾಡಲಿದ್ದಾರೆ.

ಒಬಾಮ ಭೇಟಿ
ಪರಮಾಣು ಭದ್ರತಾ ಸಮಾವೇಶಕ್ಕೆ ಇಲ್ಲಿಗೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಔತಣಕೂಟದ ವೇಳೆ ಆಲಂಗಿ ಸಿಕೊಂಡು ಯೋಗಕ್ಷೇಮ ವಿಚಾರಿಸಿದರು.

ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಮನಮೋಹನ್ ಸಿಂಗ್ ಕುಶಲ ವಿಚಾರಿಸಿದರು.

ಟ್ಯಾಬ್ಲೆಟ್ ಉಡುಗೊರೆ 
ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ವದೇಶಕ್ಕೆ ಹಿಂದಿರುಗುವಾಗ, ಅಗತ್ಯಕ್ಕೆ ತಕ್ಕಂತೆ ಮರು ರೂಪಿಸಿದ ಮತ್ತು ಕೊರಿಯಾದ ವಿಶಿಷ್ಟ ಕಲೆಯಿಂದ ವಿನ್ಯಾಸಗೊಳಿಸಿದ ಸ್ಯಾಮ್‌ಸಂಗ್ ಕಂಪೆನಿಯ ಅತ್ಯಾಧುನಿಕ ಟ್ಯಾಬ್ಲೆಟ್‌ನ್ನು ಜೊತೆಯಲ್ಲಿ ತರಲಿದ್ದಾರೆ.

ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನೆನಪಿಗಾಗಿ ಪ್ರಧಾನಿ ಸಿಂಗ್ ಸೇರಿದಂತೆ ವಿಶ್ವದ ಎಲ್ಲಾ ನಾಯಕರಿಗೆ ಅಧ್ಯಕ್ಷ ಲೀ ಮ್ಯೂಂಗ್ ಬಾಕ್ ಅವರು ಸ್ಯಾಮ್‌ಸಂಗ್ ಕಂಪೆನಿಯ ಅತ್ಯಾಧುನಿಕ ಗ್ಯಾಲಕ್ಸಿ ಟ್ಯಾಬ್ಲೆಟ್‌ನ್ನು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಟ್ಯಾಬ್ಲೆಟ್‌ನ ಹಿಂಭಾಗವು ಕೊರಿಯಾ ಭಾಷೆಯಲ್ಲಿ ನಜಿಯೊನ್ ಚಿಲ್ಗಿ ಎಂದು ಕರೆಯಲಾಗುವ ಮೆರುಗು ಹೊಂದಿರುವ ಕಪ್ಪೆಚಿಪ್ಪಿನ ಕುಸುರಿ ಕೆತ್ತನೆಯಿಂದ ಅಲಂಕೃತವಾಗಿದೆ ಮತ್ತು ಆಯಾ ದೇಶದ ನಾಯಕರ ಹೆಸರನ್ನು ಹೊಂದಿದೆ. ಮತ್ತು ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಕೊರಿಯಾಟೈಮ್ಸ.ಕೊ.ಕೆಆರ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.