ADVERTISEMENT

ಸ್ವಾತ್ ತೊರೆಯಲು ಮಲಾಲಾ ಸ್ನೇಹಿತೆ ಕುಟುಂಬ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಇಸ್ಲಾಮಾಬಾದ್ (ಪಿಟಿಐ): ಹೆಣ್ಣು ಮಕ್ಕಳ ಶಿಕ್ಷಣದ ಪರ ದನಿಯೆತ್ತಿದ್ದ ಪಾಕಿಸ್ತಾನದ ಬಾಲಕಿ ಮಲಾಲಾ ಯೂಸುಫ್‌ಝೈ ಮೇಲೆ ತಾಲಿಬಾನಿಗಳು ನಡೆಸಿದ ಗುಂಡಿನ ದಾಳಿ ವೇಳೆ ಆಕೆಯೊಂದಿಗೆ ಗಾಯಗೊಂಡಿದ್ದ ಸಹಪಾಠಿ ಶಾಜಿಯ ರಮ್ಜಾನ್ ಕುಟುಂಬ ಸ್ವಾತ್ ಪ್ರದೇಶ ತೊರೆಯಲು ನಿರ್ಧರಿಸಿದೆ.

`ಭದ್ರತೆಯ ಕಾರಣಕ್ಕಾಗಿ ಸ್ವಾತ್ ಕಣಿವೆ ತೊರೆದು ಪಂಜಾಬ್‌ನಲ್ಲಿರುವ ತಮ್ಮ ಸ್ವಂತ ಊರಾದ ಮುಜಾಫರ್‌ಗಡದಲ್ಲಿ ನೆಲೆಸಲು ತೀರ್ಮಾನಿಸಿದ್ದೇನೆ' ಎಂದು ಶಾಜಿಯಾ ತಂದೆ ಮುಹಮ್ಮದ್ ರಮ್ಜಾನ್ ನೀಡಿರುವ ಹೇಳಿಕೆಯನ್ನು `ಡಾನ್' ಉಲ್ಲೇಖಿಸಿದೆ. ರಮ್ಜಾನ್ ಅವರು ಕಳೆದ 20 ವರ್ಷಗಳಿಂದ ಸ್ವಾತ್‌ನಲ್ಲಿ ಸಿಹಿ ತಿನಿಸು ಅಂಗಡಿ ಇಟ್ಟುಕೊಂಡಿದ್ದಾರೆ.

ಕಳೆದ ಎರಡು ವಾರದ ಹಿಂದೆ ರಮ್ಜಾನ್ ಅವರ ನಿವಾಸದ ಹತ್ತಿರ ಬಾಂಬ್ ಸ್ಫೋಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ಖೈಬರ್-ಪಖ್ತುನ್‌ವಾ ಸರ್ಕಾರ ರಮ್ಜಾನ್ ಅವರ ನಿವಾಸಕ್ಕೆ ಭದ್ರತೆ ಒದಗಿಸುವುದಾಗಿ ಹೇಳಿತ್ತು. ಆದರೂ ರಮ್ಜಾನ್ ಕುಟುಂಬ ಭದ್ರತೆಯ ಕಾರಣಕ್ಕಾಗಿ ಸ್ವಾತ್ ತೊರೆದು  ಮುಜಾಫರ್‌ಗಡಕ್ಕೆ ಹೋಗಿ ನೆಲೆಸಲು ತೀರ್ಮಾನಿಸಿದೆ.

ಅಕ್ಟೋಬರ್ 9ರಂದು ತಾಲಿಬಾನಿಗಳು ಮಲಾಲಾಳ ಮೇಲೆ ಆಕೆಯ ಶಾಲೆಯ ಸಮೀಪ ಗುಂಡಿನ ದಾಳಿ ನಡೆಸಿದ್ದರು. ದಾಳಿ ವೇಳೆ ಮಲಾಲಾಳೊಂದಿಗೆ ಸಹಪಾಠಿ ಶಾಜಿಯಾ ಗಾಯಗೊಂಡು ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು, ಆನಂತರ ಚೇತರಿಸಿಕೊಂಡಿದ್ದಳು.
ಸದ್ಯ ಮಲಾಲಾ ಬ್ರಿಟನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆಕೆಯ ತಂದೆ ಜಿಯಾವುದ್ದೀನ್ ಯೂಸೂಫ್‌ಝೈ ಅವರು ಜಾಗತಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.