ADVERTISEMENT

ಹಿಂದೂ ಮಹಾಸಾಗರದಲ್ಲಿ ಶೋಧ

‘ಆಪರೇಷನ್‌ ಸರ್ಚ್‌ಲೈಟ್‌’ ಘೋಷಣೆಯಡಿ ಭಾರತ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ವಾಷಿಂಗ್ಟನ್‌, ಕ್ವಾಲಾಲಂಪುರ (ಪಿಟಿಐ):  ಕಣ್ಮರೆಯಾಗಿರುವ ವಿಮಾನಪತ್ತೆಗೆ ಹಲವು ದೇಶಗಳ ಸಹಯೋಗದಲ್ಲಿ ನಡೆ­ಯು­ತ್ತಿರುವ ಶೋಧ ಕಾರ್ಯಾಚರಣೆ ಹಿಂದೂ ಮಹಾಸಾಗರದತ್ತ ವಿಸ್ತರಣೆ­ಗೊಂಡಿದೆ. ಈ ಮಧ್ಯೆ ವಿಮಾನ ಕಣ್ಮರೆ­ಯಾ­ಗು­ವುದಕ್ಕೂ ಮುನ್ನ ಹಲವು ಗಂಟೆ­ಗಳ ಕಾಲ ಅಂಡಮಾನ್‌ ದ್ವೀಪದತ್ತ ಹಾರಾಟ ನಡೆಸಿತ್ತು ಎಂದು ವರದಿ­ಯಾಗಿದೆ.

‘ಎಂಎಚ್‌–370’ ವಿಮಾನ ಮಲಯ ದ್ವೀಪಕಲ್ಪದಿಂದ ಅಂಡ­ಮಾನ್‌ನತ್ತ ಹಾರಾಟ ನಡೆಸಿತ್ತು ಎಂದು ಇನ್ನೊಂದು ವರದಿ ಹೇಳಿದೆ. ಕಣ್ಮರೆ­ಯಾಗಿರುವ ವಿಮಾನವು ಭಾರತವೂ ಸೇರಿದಂತೆ 13 ದೇಶಗಳು ಶೋಧ ಕಾರ್ಯಾಚರಣೆ ಕೈಗೊಂಡಿರುವ ಸ್ಥಳದಿಂದ ಅತಿದೂರದಲ್ಲಿ ಹಾರಾಟ ನಡೆಸಿತ್ತು ಎಂದು ಅಮೆರಿಕದ ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ಸಾಧ್ಯತೆಗಳನ್ನು ವಿಮಾನಯಾನ ಪರಿಣಿತರು ಅಲ್ಲಗಳೆದಿದ್ದಾರೆ. ಬೋಯಿಂಗ್‌­777- 200 ಶ್ರೇಣಿಯ ವಿಮಾನಗಳು ಕಂಡುಹಿಡಿಯ­ಲಾ­ಗದಷ್ಟು ದೂರ ಹಾರಾಟ ನಡೆಸು­ವುದಿಲ್ಲ ಎನ್ನುವ ಕಾರಣವನ್ನೂ ಅವರು ನೀಡಿದ್ದಾರೆ.

ವಿಮಾನದ ಪತ್ತೆ ಮಾಡಲು ಮಲೇಷ್ಯಾ ತನ್ನ ಕಾರ್ಯಾ­ಚರಣೆಯನ್ನು ಹಿಂದೂ ಮಹಾಸಾಗರದತ್ತ ವಿಸ್ತರಿಸಿದೆ. ವಿಮಾನದ ಶೋಧಕ್ಕಾಗಿ ರೇಡಾರ್‌ ದತ್ತಾಂಶ­ಗಳನ್ನು ಒದಗಿಸು­ವಂತೆ ತನ್ನ ನೆರೆಯ ರಾಷ್ಟ್ರ ಮತ್ತು ಭಾರತಕ್ಕೆ ಅದು ಮನವಿ ಮಾಡಿಕೊಂಡಿದೆ. ‘ಆಪರೇಷನ್‌ ಸರ್ಚ್‌ಲೈಟ್‌’  ಘೋಷಣೆಯಡಿ  ಅತ್ಯಾಧುನಿಕ ಕಡಲು ಕಣ್ಗಾವಲು ವಿಮಾನ ಪಿ–81 ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ಭಾರತೀಯ ನೌಕಾ, ವಾಯುದಳ ಮತ್ತು ಕಡಲ್ಗಾ­ವಲು ಪಡೆಗಳು ದಕ್ಷಿಣ ಅಂಡಮಾನ್‌ ಸಮುದ್ರದಲ್ಲಿ ಹುಡು­ಕಾಟ ಆರಂಭಿಸಿವೆ.

‘ವಿಮಾನ ಶೋಧಕ್ಕೆ ಭಾರತ ಮತ್ತು ನೆರೆಯ ರಾಷ್ಟ್ರಗಳ ಬಳಿ ರೇಡಾರ್‌ ದತ್ತಾಂಶಗಳನ್ನು ಕೇಳಲಾಗಿದೆ.  ಹುಡು­ಕಾಟದ ಪ್ರದೇಶವನ್ನು ವಿಸ್ತರಿಸಲಾಗಿದೆ’ ಎಂದು ಮಲೇಷ್ಯಾದ ಹಂಗಾಮಿ ಸಾರಿಗೆ ಸಚಿವ ಹಿಶಮುದ್ದೀನ್‌ ಅಹ್ಮದ್‌ ಶುಕ್ರವಾರ ಹೇಳಿದ್ದಾರೆ. ‘ಇತರ ದೇಶಗಳ ಸಹಭಾಗಿತ್ವ­ದೊಂದಿಗೆ ಶೋಧ ಕಾರ್ಯಾ­ಚರಣೆಯನ್ನು ದಕ್ಷಿಣ ಚೀನಾ ಸಮುದ್ರ ಮತ್ತು ಹಿಂದೂ ಮಹಾಸಾಗರದತ್ತ ವಿಸ್ತರಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಹೊಸ ಮಾಹಿತಿ: ‘ಹೊಸದಾಗಿ ಕೆಲವೊಂದು ಮಾಹಿತಿ­ಗಳು ಬಂದಿವೆ. ಅದು ಖಚಿತವಲ್ಲ. ಆದರೆ, ನನ್ನ ತಿಳಿವಳಿಕೆಯಂತೆ ಆ ಮಾಹಿತಿ ಆಧರಿಸಿ ಹಿಂದೂ ಮಹಾಸಾಗರ­ದತ್ತ ವಿಮಾನದ ಶೋಧ ಕಾರ್ಯಚರಣೆ ನಡೆಸಬಹುದು’ ಎಂದು ಶ್ವೇತ ಭವನದ ವಕ್ತಾರ ಜೇ ಕಾರ್ನಿ ತಿಳಿಸಿದ್ದಾರೆ. 

ಗಮನಾರ್ಹವೆಂದರೆ, ಕಣ್ಮರೆ­ಯಾ­ಗಿರುವ ವಿಮಾನ ಹಿಂದೂ ಮಹಾ­ಸಾಗರದ ಆಳದಲ್ಲಿರುವ ಸಾಧ್ಯತೆ ಇದೆ ಎಂದು ಅಮೆರಿಕದ ರಕ್ಷಣಾ ಮತ್ತು ವಿಮಾನಯಾನ ಪರಿಣಿತರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ವಿಸ್ತರಿಸ­ಲಾಗಿದೆ. ಭಾರತದೊಂದಿಗೆ ಹೆಚ್ಚು ವ್ಯಾಪ್ತಿಯ ರೆಡಾರ್‌ ಮತ್ತು ಸಂಪರ್ಕ ಸಾಮರ್ಥ್ಯ ಹೊಂದಿರುವ ಅಮೆರಿಕ ನೌಕಾದಳದ ಪಿ–3ಸಿ ಓರಿಯನ್‌ ಕಡಲ ಕಣ್ಗಾವಲು ವಿಮಾನಗಳು ಮಲಕ್ಕಾ ಜಲಸಂಧಿ ಪಶ್ಚಿಮದಲ್ಲಿರುವ ಅಂಡಮಾನ್‌ ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ಉಪಗ್ರಹ ಸಂಪರ್ಕ: ಕಣ್ಮರೆಯಾದ ನಾಲ್ಕು ಗಂಟೆಗಳ ನಂತರ ವಿಮಾನವು ಸಂಪರ್ಕ ಉಪಗ್ರಹಕ್ಕೆ ಸಂದೇಶ­­ಗಳನ್ನು ರವಾನಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿರು­ವು­ದನ್ನು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. ‘ಕಣ್ಮರೆಯಾಗಿರುವ ವಿಮಾನ ರೇಡಾರ್‌ ಸಂಪರ್ಕ ಕಳೆದು­ಕೊಳ್ಳು­ವುದಕ್ಕೂ ಮುನ್ನ ವಿಮಾನ ತನ್ನ ವೇಗ ಮತ್ತು ಇರುವ ಸ್ಥಳದ ದತ್ತಾಂಶ­ಗಳನ್ನು ಸಂಪರ್ಕ ಉಪಗ್ರಹ ಪಡೆದು­ಕೊಂಡಿದೆ’ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ಹೇಳಿದೆ.

ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡ ನಂತರ ವಿಮಾನ ಮತ್ತಷ್ಟು ದೂರ ಸಾಗಿದೆ ಎಂಬ ವರದಿ ಇದ್ದು ಯಾವುದೋ ಉದ್ದೇಶಕ್ಕಾಗಿ ಪೈಲಟ್‌ ಅಥವಾ ವಿಮಾನ ಚಾಲನೆ­ಯಲ್ಲಿ ಅನು­ಭವ ಹೊಂದಿರುವವ­ರೊಬ್ಬರು ವಿಮಾನ ಅಪಹರಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. 

ಪೈಲಟ್‌ ಆತ್ಮಹತ್ಯೆ?: ಪೈಲಟ್‌ ಆತ್ಮಹತ್ಯೆ ಮಾಡಿಕೊಂಡಿ­ರು­ವುದು ವಿಮಾನ ಕಣ್ಮರೆಯಾಗಲು ಸಂಭವನೀಯ ಕಾರಣ ಎಂದು ಪರಿಣಿ­ಸಬ­ಹು­ದಾಗಿದೆ ಎಂದು ಆಸ್ಟ್ರೇಲಿಯಾ ಮತ್ತು ಅಂತರ­ರಾಷ್ಟ್ರೀಯ ಪೈಲಟ್‌ ಸಂಘದ ಸದಸ್ಯ ಮೈಕ್‌ ಗ್ಲೈನ್‌ ಹೇಳಿದ್ದಾರೆ.
‘ಪೈಲಟ್‌ ಹೊರತಾಗಿ ಅಪಹರಣ­ಕಾ­ರರಿಗೆ ಮಾತ್ರ ಸಂಪರ್ಕ ಸಾಧನ­ಗಳನ್ನು ಸ್ವಿಚ್‌ಆಫ್‌ ಮಾಡುವುದು ತಿಳಿದಿ­ರುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

‘ದತ್ತಾಂಶ ದಾಖಲೆ ಪಡೆದುಕೊಳ್ಳು­ವ ಪ್ರಯತ್ನಗಳನ್ನು ಕಡಿಮೆ ಮಾಡಲು ಮತ್ತು ವಿಪತ್ತಿನ ಕಾರಣಗಳನ್ನು ರಹಸ್ಯ­ವಾಗಿಡಲು ಪೈಲಟ್‌ ವಿಮಾನ­ವನ್ನು ಹಿಂದೂ ಮಹಾ­ಸಾಗರದತ್ತ ಹಾರಾಟ ನಡೆಸಲು ಯತ್ನಿಸಿದ ಸಾಧ್ಯತೆಗಳಿವೆ’ ಎಂದು ಗ್ಲೈನ್‌ ವಿವರಿಸಿದ್ದಾರೆ. 

ಅವಶೇಷಗಳು ತೇಲಬೇಕಿತ್ತು: ವಿಮಾನ ಸಮುದ್ರದಲ್ಲಿ ಬಿದ್ದಿದ್ದರೆ ಅದರ ಅವಶೇಷಗಳು ತೇಲಬೇಕಿತ್ತು. ಇಂತಹ ಪ್ರಕರಣ ಸಂಭವಿಸಿದ ನಂತರ ಭಗ್ನಾವಶೇಷಗಳು ಹುಡುಕಲು ಅಧಿಕ ಸಮಯ ತೆಗೆದುಕೊಳ್ಳುತ್ತದೆ’ ಎಂದು ಪರಿಣಿತರು ಹೇಳಿದ್ದಾರೆ.

ಅಲೌಕಿಕ ಶಕ್ತಿ ಸಂಪರ್ಕ ಇಲ್ಲ: ವಿಮಾನ ಕಣ್ಮರೆಯಲ್ಲಿ ಅಲೌಕಿಕ ಶಕ್ತಿಗಳ ಸಂಪರ್ಕ ಇದೆ ಎನ್ನುವುದನ್ನು ಮಲೇಷ್ಯಾ ತಳ್ಳಿಹಾಕಿದೆ. ವಿಮಾನ ಶೋಧ ಕಾರ್ಯಾಚರಣೆ ದೈವಿಕ ಮಾರ್ಗದರ್ಶನ ಪಡೆಯುವ ಸಲುವಾಗಿ ಮುಸ್ಲಿಂ ಮಂತ್ರ­ವಾದಿ ನೇಮಕ ಮಾಡುವುದನ್ನು ಮಲೇಷ್ಯಾ ಶುಕ್ರವಾರ ನಿರಾಕರಿಸಿದೆ.

ಸಾಗರ ತಳದಲ್ಲಿ ಚಟುವಟಿಕೆ: ಮಲೇಷ್ಯಾ ಮತ್ತು ವಿಯೆಟ್ನಾಂ ಮಧ್ಯೆ ‘ಸಾಗರ ಸ್ತರದಲ್ಲಿ ಚಟುವಟಿಕೆ’ ನಡೆದಿರುವುದನ್ನು ಚೀನಾದ ಸಂಶೋಧಕರು ಪತ್ತೆಮಾಡಿದ್ದು, ಇದೇ  ಸ್ಥಳದಲ್ಲಿ ಮಲೇಷ್ಯಾದ ವಿಮಾನ ಕಣ್ಮರೆಯಾಗಿದೆ ಎಂದು ಶಂಕಿಸಲಾಗಿದೆ.

ವಿಮಾನ ಶೋಧಕ್ಕೆ ಕೈಜೋಡಿಸಿದ ನಾಸಾ
ವಾಷಿಂಗ್ಟನ್‌ (ಐಎಎನ್‌ಎಸ್‌):
ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ಏರ್‌ಲೈನ್ಸ್‌ನ ವಿಮಾನದ ಪತ್ತೆ ಕಾರ್ಯಕ್ಕೆ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ, ನಾಸಾ ಕೂಡ ಕೈಜೋಡಿಸಿದೆ.

‘ವಿಮಾನ ಪತನಗೊಂಡಿರುವ ಸಂಭಾವ್ಯ ಸ್ಥಳಗಳ ಹೊಸ ಚಿತ್ರಗಳನ್ನು ಪಡೆಯುವುದಕ್ಕಾಗಿ ಭೂ ವೀಕ್ಷಣೆ­ಯಲ್ಲಿ ತೊಡಗಿರುವ ಉಪಗ್ರಹ (ಇಒ–1), ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ‘ಐಎಸ್‌ಇಆರ್‌ವಿ’ ಕ್ಯಾಮೆರಾ ಸೇರಿದಂತೆ ಬಾಹ್ಯಾಕಾಶದಲ್ಲಿರುವ ಇತರ ಉಪ­ಕರಣ­ಗಳು ಈ ಹಿಂದೆ ಕಳುಹಿಸಿರುವ ದತ್ತಾಂಶಗಳನ್ನು (ಮಾಹಿತಿ, ಚಿತ್ರಗಳು) ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ನಾಸಾ ವಕ್ತಾರ ಅಲ್ಲಾರ್ಡ್‌ ಬ್ಯೂಟೆಲ್‌ ಹೇಳಿರುವುದಾಗಿ ಸ್ಪೇಸ್‌ ಡಾಟ್‌ ಕಾಮ್‌ ವರದಿ ಮಾಡಿದೆ.

ಜಗತ್ತಿನಲ್ಲಿ ನಡೆಯುವ ವಿಪತ್ತು ಹಾಗೂ ವಾತಾವರಣಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ನಡೆಸುವುದಕ್ಕಾಗಿಯೇ ಐಎಸ್‌ಎಸ್‌ನಲ್ಲಿ ‘ಐಎಸ್‌ಇಆರ್‌ವಿ’ ಕ್ಯಾಮೆರಾವನ್ನು 2012ರ ಜುಲೈನಲ್ಲಿ ಅಳವಡಿಸ­ಲಾಗಿತ್ತು.

ಈ ಸಾಧನಗಳು ಕಳುಹಿಸುವ ಚಿತ್ರಗಳ ಮೂಲಕ 98 ಅಡಿ ಅಥವಾ ಅದಕ್ಕಿಂತಲೂ ಹೆಚ್ಚು ಗಾತ್ರದ ವಸ್ತುಗಳನ್ನು ಗುರುತಿಸಬಹುದಾಗಿದೆ. ಸಂಗ್ರಹಿಸಿರುವ ಅಗತ್ಯ ಮಾಹಿತಿಗಳನ್ನು ನಾಸಾವು ಅಮೆರಿಕದ  ಭೌಗೋಳಿಕ ಸಮೀಕ್ಷೆಯ ಭೂ ಸಂಪನ್ಮೂಲಗಳ ವೀಕ್ಷಣಾ ಕೇಂದ್ರ ಮತ್ತು ವಿಜ್ಞಾನ ಆಪತ್ತು ಮಾಹಿತಿ ವಿತರಣಾ ವ್ಯವಸ್ಥೆಗೆ ಕಳುಹಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.