ADVERTISEMENT

ಹೆಲಿಕಾಪ್ಟರ್ ಅಪಘಾತ- 17ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 19:00 IST
Last Updated 19 ಏಪ್ರಿಲ್ 2011, 19:00 IST
ಹೆಲಿಕಾಪ್ಟರ್ ಅಪಘಾತ- 17ಸಾವು
ಹೆಲಿಕಾಪ್ಟರ್ ಅಪಘಾತ- 17ಸಾವು   

ಇಟಾನಗರ್ (ಪಿಟಿಐ, ಐಎಎನ್‌ಎಸ್):ಚೀನಾ ಗಡಿ ಭಾಗದಲ್ಲಿರುವ ತವಾಂಗ್‌ನ ಹೆಲಿಪ್ಯಾಡ್‌ನಲ್ಲಿ ಮಂಗಳವಾರ ಮಧ್ಯಾಹ್ನ ಗುವಾಹಟಿಯಿಂದ ಬಂದು ಇಳಿಯುವ ಹಂತದಲ್ಲಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಬೆಟ್ಟದ ಇಳಿಜಾರಿಗೆ ಅಪ್ಪಳಿಸಿ ಬೆಂಕಿಯ ಉಂಡೆಯಾಗಿ ಸ್ಫೋಟಿಸಿದ್ದರಿಂದ ಅದರೊಳಗಿದ್ದ 17 ಮಂದಿ ಸತ್ತಿದ್ದು, ಇಬ್ಬರು ಪೈಲಟ್‌ಗಳು ಸಹಿತ ಆರು ಮಂದಿಯನ್ನು ರಕ್ಷಿಸಲಾಗಿದೆ.

ಹೆಲಿಕಾಪ್ಟರ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ 18 ಪ್ರಯಾಣಿಕರು, ಮೂವರು ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು. ಹೆಚ್ಚಿನ ಪ್ರಯಾಣಿಕರು ಭಾರತೀಯ ಪ್ರವಾಸಿಗಳಾಗಿದ್ದರು. ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ.ಕೇಂದ್ರ ಸರ್ಕಾರದ ಒಡೆತನದ  ಪವನ್ ಹನ್ಸ್ ಹೆಲಿಕಾಪ್ಟರ್ಸ್‌ ಲಿಮಿಟೆಡ್ (ಪಿಎಚ್‌ಎಚ್‌ಎಲ್) ಈಶಾನ್ಯ ರಾಜ್ಯಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ಸೇವೆ ನಡೆಸುತ್ತಿದೆ.
 
ಕಳೆದ ಒಂಬತ್ತು ವರ್ಷಗಳಿಂದು ಅದು 11 ಸಾವಿರ ಅಡಿ ಎತ್ತರದಲ್ಲಿರುವ ತವಾಂಗ್‌ಗೆ ಪ್ರಯಾಣಿಕರನ್ನು ಸಾಗಿಸುವ ಸೇವೆ ಸಲ್ಲಿಸುತ್ತಿತ್ತು. ಮಂಗಳವಾರ ಮಧ್ಯಾಹ್ನ 12.50ಕ್ಕೆ ಈ ಎಂಐ-17 ಹೆಲಿಕಾಪ್ಟರ್ ಗುವಾಹಟಿ ಬಿಟ್ಟಿತ್ತು. 1.57ರ ಹೊತ್ತಿಗೆ ಈ ಅಪಘಾತ ಸಂಭವಿಸಿತು. ಈ ಹೆಲಿಕಾಪ್ಟರ್‌ನಲ್ಲಿ 30 ಮಂದಿ ಪ್ರಯಾಣಿಸುವುದು ಸಾಧ್ಯವಿತ್ತು. ತವಾಂಗ್‌ನಲ್ಲಿನ ಹೆಲಿಪ್ಯಾಡ್ ಇರುವ ಸ್ಥಳದ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿದೆ. ಸೋಮವಾರವೂ ಇಲ್ಲಿಗೆ ಹೆಲಿಕಾಪ್ಟರ್ ಬಂದು ಹೋಗಿತ್ತು. ತಕ್ಷಣದ ಪರಿಹಾರ ಕಾರ್ಯಗಳು ಕೊನೆಗೊಂಡ ಬಳಿಕ ದುರಂತಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸಲಿದ್ದೇವೆ ಎಂದು ಅಧಿಕಾರಿಯೊಬ್ಬರು ಇಟಾನಗರದಲ್ಲಿ ತಿಳಿಸಿದರು.ಕಳೆದ ನವೆಂಬರ್‌ನಲ್ಲಿ ತವಾಂಗ್ ಸಮೀಪ ಸೇನೆಯ ಎಂಐ-17 ಹೆಲಿಕಾಪ್ಟರ್ ದುರಂತಕ್ಕೀಡಾಗಿ 12 ಮಂದಿ ಯೋಧರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.