ಬೀಜಿಂಗ್ (ಪಿಟಿಐ): ‘ಒಂದೇ ಮಗು’ ಎಂಬ ವಿವಾದಾತ್ಮಕ ಕಾನೂನನ್ನು ಕೊನೆಗೂ ಚೀನಾ ಸರ್ಕಾರ ಗುರುವಾರ ಕೈಬಿಟ್ಟಿದ್ದು ಇನ್ನು ಮುಂದೆ ಇಬ್ಬರು ಮಕ್ಕಳನ್ನು ಹೊಂದಲು ದಂಪತಿಗೆ ಅವಕಾಶ ಸಿಕ್ಕಿದೆ.
ದಶಕಗಳಿಂದಲೂ ಜಾರಿಯಲ್ಲಿದ್ದ ಮತ್ತು ಅತ್ಯಧಿಕ ಟೀಕೆಗೆ ಕಾರಣವಾಗಿದ್ದ ‘ಒಂದೇ ಮಗು’ ಎಂಬ ಕಾನೂನನ್ನು ಕೈಬಿಟ್ಟಿರುವುದಾಗಿ ಚೀನಾದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಮುಂದಿನ ಐದು ವರ್ಷಗಳ ಅವಧಿಗೆ ಕಾರ್ಯಯೋಜನೆ ರೂಪಿಸಲು ಆಡಳಿತಾರೂಢ ಎಡಪಕ್ಷ ಕಳೆದ ನಾಲ್ಕು ದಿನಗಳಿಂದ ನಡೆಸಿದ ಸಭೆಯಲ್ಲಿ, ಮೂರು ದಶಕಗಳಿಂದಲೂ ಜಾರಿಯಲ್ಲಿದ್ದ ಕಾನೂನನ್ನು ರದ್ದುಮಾಡುವ ತೀರ್ಮಾನ ಕೈಗೊಳ್ಳಲಾಯಿತು. ದೀರ್ಘಕಾಲದಿಂದ ಅಸ್ತಿತ್ವದಲ್ಲಿದ್ದ ಕಾನೂನನ್ನು ಚೀನಾ ಕೈಬಿಟ್ಟಿರುವುದು ಇದೇ ಮೊದಲು ಎಂದೂ ವರದಿ ಹೇಳಿದೆ.
ಒಂದೇ ಮಗುವಿರುವ ಪೋಷಕರು ಎರಡನೇ ಮಗುವನ್ನು ಪಡೆಯಲು ಚೀನಾ ತನ್ನ ನೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ದೇಶದ ಜನಸಂಖ್ಯಾ ಬಿಕ್ಕಟ್ಟಿನ ಮೇಲೆ ಪರಿಣಾಮ ಬೀರುವ ಬಗ್ಗೆ ಟೀಕೆಗಳು ವ್ಯಕ್ತವಾದ ಕಾರಣ, ಚೀನಾ ತನ್ನ ಒಂದೇ ಮಗು ನೀತಿಯನ್ನು ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2050ರ ಹೊತ್ತಿಗೆ ಚೀನಾದ ಜನಸಂಖ್ಯೆಯಲ್ಲಿ 60ಕ್ಕೂ ಹೆಚ್ಚಿನ ವಯಸ್ಸಿನ ಸುಮಾರು 44 ಕೋಟಿ ಜನ ಇರುತ್ತಾರೆ. 1970ರ ದಶಕದಲ್ಲಿ ಚೀನಾ ಒಂದು ಮಗು ನೀತಿಯನ್ನು ಆರಂಭಿಸಿತ್ತು. ಪಟ್ಟಣದಲ್ಲಿರುವ ಪೋಷಕರು ಒಂದು ಮಗು ಹಾಗೂ ಹಳ್ಳಿಯಲ್ಲಿರುವ ಪೋಷಕರಿಗೆ ಎರಡು ಮಕ್ಕಳನ್ನು ಹೊಂದುವ ಅವಕಾಶವನ್ನು ಕಲ್ಪಿಸಲಾಗಿತ್ತು. ಅದರಲ್ಲೂ ಮೊದಲ ಮಗು ಹೆಣ್ಣಾಗಿದ್ದಲ್ಲಿ ಮಾತ್ರ ಎರಡನೇ ಮಗುವನ್ನು ಹೊಂದಬಹುದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.