ADVERTISEMENT

ಮ್ಯಾನ್ಮಾರ್‌: 100 ದಿನ ಪೂರೈಸಿದ ಸೇನಾ ಆಡಳಿತ

ಏಜೆನ್ಸೀಸ್
Published 11 ಮೇ 2021, 6:56 IST
Last Updated 11 ಮೇ 2021, 6:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್: ‘ಮ್ಯಾನ್ಮಾರ್‌ನಲ್ಲಿ ಸೇನೆಯು ಅಧಿಕಾರದ ಚುಕ್ಕಾಣಿ ಹಿಡಿದು 100 ದಿನಗಳು ಪೂರೈಸಿದ್ದು, ಎಲ್ಲವೂ ತನ್ನ ನಿಯಂತ್ರಣದಲ್ಲಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತಿದೆ. ಆದರೆ ಈವರೆಗೆ ಒಂದು ರೈಲನ್ನು ಕೂಡ ಸಮಯಕ್ಕೆ ಸರಿಯಾಗಿ ಚಲಿಸುವಂತೆ ಮಾಡಲು ಸೇನೆಗೆ ಸಾಧ್ಯವಾಗಿಲ್ಲ’ ಎಂದು ಅಲ್ಲಿನ ನಾಗರಿಕರು ದೂರಿದ್ದಾರೆ.

ಫೆಬ್ರುವರಿ 1 ರಂದು ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದ ಮ್ಯಾನ್ಮಾರ್‌ ಸೇನೆಯು ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು.

ಈ ಬಳಿಕ ದೇಶದ ರೈಲ್ವೆ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಮಿಲಿಟರಿ ಆಡಳಿತದ ವಿರುದ್ಧ ಪ್ರತಿಭಟಿಸಲು ಆರಂಭಿಸಿದರು. ಸೇನೆಯು ಬಲ ಪ್ರಯೋಗಿಸುವ ಮೂಲಕ ಜನರು ರಸ್ತೆಗಿಳಿದು ಪ್ರತಿಭಟಿಸದಂತೆ ತಡೆಯುವಲ್ಲಿ ಭಾಗಶಃ ಸಫಲವಾಗಿದೆ. ಸ್ವತಂತ್ರ ಮಾಧ್ಯಮಗಳನ್ನು ಕಾರ್ಯನಿರ್ವಹಿಸದಂತೆ ನಿರ್ಬಂಧಿಸಿದೆ. ಆದರೆ ಈಗಲೂ ಮ್ಯಾನ್ಮಾರ್‌ನಲ್ಲಿ ಅಸಹಕಾರ ಚಳವಳಿ ಜಾರಿಯಲ್ಲಿದೆ ಎಂದು ಅಲ್ಲಿನ ನಾಗರಿಕರು ಹೇಳಿದ್ದಾರೆ.

ADVERTISEMENT

‘ಈ ಅಸಹಕಾರ ಚಳವಳಿಯನ್ನು ಆರಂಭಿಸಿದ ಆರೋಗ್ಯ ಕಾರ್ಯಕರ್ತರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೆಲಸವನ್ನು ತಿರಸ್ಕರಿಸಿದ್ದಾರೆ. ಹಲವು ನಾಗರಿಕ ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳ ಸಿಬ್ಬಂದಿಯು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಸರ್ಕಾರಿ ಕಾಲೇಜುಗಳನ್ನು ಬಹಿಷ್ಕರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ 750 ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.