ADVERTISEMENT

1000 ಕಿ.ಮೀ ಉದ್ದದ ಸುರಂಗಕ್ಕೆ ಚೀನಾ ಯೋಜನೆ

ಬ್ರಹ್ಮಪುತ್ರಾ ನದಿ ನೀರು ಸಾಗಿಸಲು ಮುಂದಾದ ಚೀನಾ

ಪಿಟಿಐ
Published 31 ಅಕ್ಟೋಬರ್ 2017, 10:24 IST
Last Updated 31 ಅಕ್ಟೋಬರ್ 2017, 10:24 IST
1000 ಕಿ.ಮೀ ಉದ್ದದ ಸುರಂಗಕ್ಕೆ ಚೀನಾ ಯೋಜನೆ
1000 ಕಿ.ಮೀ ಉದ್ದದ ಸುರಂಗಕ್ಕೆ ಚೀನಾ ಯೋಜನೆ   

ಬೀಜಿಂಗ್: ವಿಶ್ವದಲ್ಲೇ ಅತ್ಯಂತ ಉದ್ದವಾದ 1000 ಕಿ. ಮೀವರೆಗಿನ ದೂರದ ಸುರಂಗ ನಿರ್ಮಿಸಲು ಚೀನಾ ತಾಂತ್ರಿಕ ಸಾಧ್ಯತೆಗಳ ಪರಿಶೀಲನೆಯಲ್ಲಿ ತೊಡಗಿದೆ. ಅರುಣಾಚಲ ಪ್ರದೇಶ ಸಮೀಪದ ಟಿಬೆಟ್‌ನಿಂದ ಬರಪೀಡಿತ ಕ್ಸಿನ್‌ಜಿಯಾಂಗ್‌ಗೆ ಬ್ರಹ್ಮಪುತ್ರಾ ನದಿ ನೀರನ್ನು ಸಾಗಿಸುವುದು ಇದರ ಉದ್ದೇಶ.

ಕ್ಸಿನ್‌ಜಿಯಾಂಗ್‌ ಅನ್ನು ಕ್ಯಾಲಿಫೋರ್ನಿಯಾದ ರೀತಿ ಬದಲಿಸುವ ನಿರೀಕ್ಷೆಯಿರುವ ಈ ಯೋಜನೆಯನ್ನು ಪರಿಸರ ತಜ್ಞರು ಪ್ರಶ್ನಿಸಿದ್ದಾರೆ. ಈ ಯೋಜನೆಯು ಹಿಮಾಲಯ ಶ್ರೇಣಿಗೆ ಅಪಾಯ ತರುವ ಸಾಧ್ಯತೆಯಿದೆ ಎಂದು ಹಾಂಕಾಂಗ್‌ನ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಚೀನಾದ ಅತಿದೊಡ್ಡ ಆಡಳಿತಾತ್ಮಕ ಕೇಂದ್ರಕ್ಕೆ ತೆರಳುವ ಮಾರ್ಗಮಧ್ಯೆ ಹಲವು ಬರಪೀಡಿತ ಹಾಗೂ ಒಣಭೂಮಿಗೆ ಈ ಉದ್ದೇಶಿತ ಯೋಜನೆಯು ನೀರುಣಿಸಲಿದೆ. ದಕ್ಷಿಣ ಟಿಬೆಟ್‌ನ ಯಾರ್ಲುಂಗ್‌ ಟ್ಸಂಗ್‌ಪೊ ನದಿಯ ನೀರನ್ನು ತಿರುಗಿಸಿ ಕ್ಸಿನ್‌ಜಿಯಾಂಗ್‌ನ ತಕ್ಲಮಕೆನ್ ಮರುಭೂಮಿಗೆ ನೀರು ಸಾಗಿಸಲಾಗುತ್ತದೆ. ಯರ್ಲುಂಗ್ ನದಿಯು ಭಾರತ ಪ್ರವೇಶಿಸಿದ ಮೇಲೆ ಬ್ರಹ್ಮಪುತ್ರ ಎನಿಸಿಕೊಳ್ಳುತ್ತದೆ.

ADVERTISEMENT

100ಕ್ಕೂ ಹೆಚ್ಚು ವಿಜ್ಞಾನಿಗಳು ಯೋಜನೆಯ ಸಾಧ್ಯತೆ ಕುರಿತು ತಯಾರಿಸಿರುವ ವರದಿಯನ್ನು ಮಾರ್ಚ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಸೆಂಗ್ರಿ ಎಂಬಲ್ಲಿ ನದಿ ತಿರುವು ಮಾಡಬಹುದು ಎಂದು ಶಿಫಾರಸು ಮಾಡಲಾಗಿದೆ.

ಚೀನಾದ ಸದ್ಯದ ಉದ್ದದ ಸುರಂಗ ಮಾರ್ಗವೆಂದರೆ ಲಿಯೊನಿಂಗ್ ಪ್ರಾಂತ್ಯದ 85 ಕಿ.ಮೀ ಉದ್ದದ ದಹೌಫಾಂಗ್ ಜಲಯೋಜನೆ. ಜಗತ್ತಿನ ಅತಿಉದ್ದದ ಸುರಂಗ ಮಾರ್ಗ ಎಂಬ ಖ್ಯಾತಿ ನ್ಯೂಯಾರ್ಕ್‌ನ 137 ಕಿ.ಮೀ ಉದ್ದದ ನೀರು ಪೂರೈಕೆ ಸುರಂಗ ಮಾರ್ಗಕ್ಕಿದೆ.

ಬ್ರ‌ಹ್ಮಪುತ್ರಾ ನದಿಗೆ ಅಡ್ಡಲಾಗಿ ಚೀನಾ ಕಟ್ಟಿರುವ ಜಲಾಶಯಗಳ ವಿರುದ್ಧ ಭಾರತ ಹಲವು ಬಾರಿ ತನ್ನ ಕಳವಳ ವ್ಯಕ್ತಪಡಿಸಿದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.