ಸಾವು (ಪ್ರಾತಿನಿಧಿಕ ಚಿತ್ರ)
ಟಿಬಿಲಿಸಿ: ಜಾರ್ಜಿಯಾದ ಗುಡೌರಿ ಪ್ರದೇಶದಲ್ಲಿನ ಮೌಂಟೇನ್ ರೆಸಾರ್ಟ್ ರೆಸ್ಟೋರೆಂಟ್‌ನಲ್ಲಿ 12 ಭಾರತೀಯರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
‘ಮೃತರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಎಲ್ಲರೂ ಕಾರ್ಬನ್ ಮೊನಾಕ್ಸೈಡ್ ವಿಷಕಾರಿ ಸೇವನೆಯಿಂದ ಮೃತಪಟ್ಟಿದ್ದಾರೆ ಎನ್ನುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ’ ಎಂದು ಕಚೇರಿ ತಿಳಿಸಿದೆ.
‘ಮೃತರೆಲ್ಲರೂ ಭಾರತದ ಪ್ರಜೆಗಳು. ಭಾರತೀಯ ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ರೆಸ್ಟೋರೆಂಟ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ಟಿಬಿಲಿಸಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಯಭಾರ ಕಚೇರಿ, ‘ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸ್ಥಳೀಯ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿ ಸಂಪರ್ಕದಲ್ಲಿದೆ. ಮೃತರ ಕುಟುಂಬ ಸದಸ್ಯರಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮಾಡಲಿದ್ದೇವೆ’ ಎಂದು ಹೇಳಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಾರ್ಜಿಯಾದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಜೀವಕ್ಕೆ ಎರವಾದ ಜನರೇಟರ್: ಪ್ರಾಥಮಿಕ ತನಿಖೆ ಪ್ರಕಾರ, ಹೋಟೆಲ್ ಒಳ ಆವರಣದಲ್ಲಿ ಪವರ್ ಜನರೇಟರ್ ಇಟ್ಟಿದ್ದು, ಬೆಡ್‌ರೂಂಗೆ ಹತ್ತಿರವಿತ್ತು. ಶುಕ್ರವಾರ ರಾತ್ರಿ ವಿದ್ಯುತ್ ಕಡಿತಗೊಂಡಿದ್ದು, ತದನಂತರ, ಜನರೇಟರ್ ಚಾಲನೆಗೊಂಡು ಅದರಿಂದ ಹೊರಬಂದ ಇಂಗಾಲದ ಮೊನಾಕ್ಸೈಡ್ ಸೇವಿಸಿ, ಮಲಗಿದ್ದವರು ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಾವಿನ ನೈಜ ಕಾರಣ ಪತ್ತೆ ಹಚ್ಚುವ ಸಂಬಂಧ ವಿಧಿವಿಜ್ಞಾನ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.