ADVERTISEMENT

ಓಮಿಕ್ರಾನ್‌: ಈಗ ನೆದರ್ಲೆಂಡ್‌ ಸರದಿ, 13 ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 13:19 IST
Last Updated 28 ನವೆಂಬರ್ 2021, 13:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೇಗ್‌: ದಕ್ಷಿಣ ಆಫ್ರಿಕಾದಿಂದ ವಿಮಾನದಲ್ಲಿ ಶುಕ್ರವಾರ ನೆದರ್ಲೆಂಡ್‌ಗೆ ಆಗಮಿಸಿದ 13 ಜನರಿಗೆ ಕೊರೊನಾ ವೈರಸ್‌ನ ಓಮಿಕ್ರಾನ್ ತಳಿಯ ಸೋಂಕಿರುವುದು ದೃಢಪಟ್ಟಿದೆ ಎಂದು ಡಚ್ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ಭಾನುವಾರ ಹೇಳಿದೆ.

ದಕ್ಷಿಣ ಆಫ್ರಿಕಾಕ್ಕೆ ವಿಮಾನಯಾನ ನಿಷೇಧಿಸುವುದಕ್ಕೂ ಮೊದಲು ಅಲ್ಲಿಂದ ಆಮ್‌ಸ್ಟರ್‌ಡ್ಯಾಮ್‌ನ ಶಿಪೋಲ್ ವಿಮಾನ ನಿಲ್ದಾಣಕ್ಕೆ ಬಂದ ಕೊನೆಯ ಎರಡು ವಿಮಾನಗಳಲ್ಲಿದ್ದ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 61 ಪ್ರಯಾಣಿಕರ ಪರೀಕ್ಷೆಗಳು ಪಾಸಿಟಿವ್‌ ಬಂದಿತ್ತು. ಅವರನ್ನು ತಕ್ಷಣವೇ ಪ್ರತ್ಯೇಕಗೊಳಿಸಲಾಯಿತು. ಇವರಲ್ಲಿ ಯಾರಾದರೂ ಓಮಿಕ್ರಾನ್‌ ಸೋಂಕಿಗೆ ಒಳಗಾಗಿರಬಹುದೇ ಎಂಬ ಪರೀಕ್ಷೆಯನ್ನೂ ಕ್ಷಿಪ್ರವಾಗಿ ನಡೆಸಲಾಯಿತು. ಅದರಲ್ಲಿ 13 ಮಂದಿಗೆ ಓಮಿಕ್ರಾನ್‌ ಸೋಂಕು ಇರುವುದು ಖಚಿತವಾಗಿದೆ.

ಮಾದರಿಗಳ ಪರೀಕ್ಷೆಯನ್ನು ಮುಂದುವರೆಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಕಳೆದ ವಾರ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಎಲ್ಲಾ ಪ್ರಯಾಣಿಕರೂ ಪರೀಕ್ಷೆಗೆ ಒಳಗಾಗಬೇಕೆಂದು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲಿಂದ ಹಿಂದಿರುಗುವ ಡಚ್ ನಾಗರಿಕರಿಗೆ ಶಿಪೋಲ್‌ ವಿಮಾನ ನಿಲ್ದಾಣದಲ್ಲಿ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.