ADVERTISEMENT

18 ಶಂಕಿತ ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): ಪಾತಕಿ ಒಸಾಮಾ ಬಿನ್ ಲಾಡೆನ್ ಮತ್ತು ಮುಂಬೈ ದಾಳಿಯ ಸೂತ್ರದಾರ ಇಲ್ಯಾಸ್ ಕಾಶ್ಮೀರಿಯ ಹತ್ಯೆಯ ಯಶಸ್ಸಿನಿಂದ ಬೀಗುತ್ತಿರುವ ಅಮೆರಿಕ ಸೇನೆ ಬುಧವಾರ ಬೆಳಗಿನ ಜಾವ ನಡೆಸಿದ ಡ್ರೋಣ್ ದಾಳಿಯಲ್ಲಿ 18 ಶಂಕಿತ ಉಗ್ರಗಾಮಿಗಳು ಮೃತಪಟ್ಟಿದ್ದಾರೆ.

ತಾಲಿಬಾನ್ ಕಮಾಂಡರ್ ಮುಲ್ಲಾ ನಾಜಿರ್ ಹಿಡಿತ ಹೊಂದಿರುವ ವಜಿರಿಸ್ತಾನ್ ಬುಡಕಟ್ಟು ಪ್ರದೇಶದ ಉಗ್ರರ ನೆಲೆಗಳು ಮತ್ತು ಅಡಗುತಾಣಗಳ ಮೇಲೆ ಡ್ರೋಣ್ ದಾಳಿ ಮುಂದುವರಿದಿದೆ. ಸೋಮವಾರ ಬೆಳಗಿನ ಜಾವ ಕೆಲ ಗಂಟೆಗಳ ಅಂತರದಲ್ಲಿ ನಡೆದ ಮೂರು ದಾಳಿಯಲ್ಲಿ ಮೃತಪಟ್ಟವರಲ್ಲಿ ಏಳು ವಿದೇಶಿ ಉಗ್ರರು ಸೇರಿದ್ದಾರೆ. 

ನಾಜಿರ್ ಗುಂಪಿಗೆ ಸೇರಿದ ಹಿರಿಯ ಕಮಾಂಡರ್ ಮಲಂಗ್ ಮತ್ತು  ಸಹಚರರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ವಜಿರಿಸ್ತಾನ್‌ದ ಪ್ರಮುಖ ಪಟ್ಟಣವಾದ ವಾನಾ ಬಳಿಯ ಮನೆಯೊಂದನ್ನು ಗುರಿಯಾಗಿಸಿಕೊಂಡು ಬೆಳಗಿನ ಜಾವ 2ಗಂಟೆಗೆ ನಡೆದ ಮೊದಲ ಕ್ಷಿಪಣಿ ದಾಳಿಯಲ್ಲಿ ಮೂವರು ಶಂಕಿತ ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕೆಲ ಹೊತ್ತಿನ ನಂತರ ಮದರಾಸಾ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ನಾಲ್ವರು ಉಗ್ರರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ದಾಳಿಗೀಡಾದ ಮನೆಯ ಅವಶೇಷಗಳ ಅಡಿಯಿಂದ ನಂತರ ಏಳು ಶವಗಳನ್ನು ಹೊರತೆಗೆಯಲಾಗಿದೆ.

ಸೋಮವಾರ ಬೆಳಿಗ್ಗೆ 11.15ಕ್ಕೆ ವಾನಾ ಪಟ್ಟಣದಿಂದ 40 ಕಿ.ಮೀ. ದೂರದಲ್ಲಿರುವ ಶಾವಲ್ ಪ್ರದೇಶದ ಮೇಲೆ ನಡೆದ ಮೂರನೇ ದಾಳಿಯಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಜಿರಿಸ್ತಾನ್ ಮೇಲೆ ಶುಕ್ರವಾರ ರಾತ್ರಿ ನಡೆದ ಡ್ರೋಣ್ ದಾಳಿಯಲ್ಲಿ ಅಲ್-ಖೈದಾ ಜತೆ ನಂಟು ಹೊಂದಿದ್ದ ಉಗ್ರ ಇಲ್ಯಾಸ್ ಕಾಶ್ಮೀರಿ ಮತ್ತು ಇತರ ಎಂಟು ಜನರು ಹತ್ಯೆಯಾಗಿದ್ದರು.

ಅಲ್ ಖೈದಾ ನಾಯಕ ಐಮನ್ ಅಲ್ ಝವಾರಿ, ಆಫ್ಘನ್ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಸೇರಿದಂತೆ ಇಲ್ಯಾಸ್ ಅಮೆರಿಕದ `ಮೋಸ್ಟ್ ವಾಂಟೆಂಡ್~ ಪಟ್ಟಿಯಲ್ಲಿದ್ದ.

ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರ ಅಡಗುತಾಣವಾಗಿರು ವಜಿರಿಸ್ತಾನ್ ಬುಡಕಟ್ಟು ಪ್ರದೇಶದ ಮೇಲೆ ಈ ವರ್ಷ ಒಟ್ಟು 35  ಡ್ರೋಣ್ ದಾಳಿ ನಡೆದಿವೆ. ಉಗ್ರರು ಸೇರಿ ಒಟ್ಟು 250 ಜನ ದಾಳಿಯಲ್ಲಿ ಪ್ರಾಣ ತೆತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.