ADVERTISEMENT

2ಜಿ ಹಗರಣ: ಭಾರತದಲ್ಲಿ ಪ್ರತಿಕ್ರಿಯಿಸುವೆ- ಪ್ರಣವ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ವಾಷಿಂಗ್ಟನ್ (ಪಿಟಿಐ): `2ಜಿ ತರಂಗಾಂತರ ಹಂಚಿಕೆ ಹಗರಣದ ಸುಳಿಗೆ  ಗೃಹ ಸಚಿವ ಪಿ. ಚಿದಂಬರಂ ಸಿಲುಕಿಕೊಂಡಿರುವ ವಿವಾದದ ಬಗ್ಗೆ ಭಾರತಕ್ಕೆ ಮರಳಿದ ನಂತರ ಮಾತನಾಡುವೆ~ ಎಂದು ಹಣಕಾಸು ಸಚಿವ ಪ್ರಣವ್ ಅವರು ತಮ್ಮನ್ನು ಭೇಟಿ ಮಾಡಿದ ಭಾರತ ಪತ್ರಕರ್ತರ ತಂಡಕ್ಕೆ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಪ್ರಣವ್, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನ್ಯೂಯಾರ್ಕ್‌ನಲ್ಲಿ ಭಾನುವಾರ ಭೇಟಿ ಮಾಡಿ, ಅಂದು ಸಂಜೆಯೇ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ.

ಪ್ರಧಾನಿ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿ ಮಾಡುವ ಸಲುವಾಗಿಯೇ ಪ್ರಣವ್ ವಾಷಿಂಗ್ಟನ್‌ನಿಂದ ಒಂದು ದಿನ ಮೊದಲೇ ನಿರ್ಗಮಿಸುತ್ತಿದ್ದಾರೆ. ಅದಕ್ಕೂ ಮುನ್ನ ಅವರು ನಿಗದಿಯಾದ ಎಲ್ಲಾ ಕಾರ್ಯವನ್ನು ಪೂರೈಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರಮುಖರ ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಪ್ರಣವ್ ಮುಖರ್ಜಿ ಭಾನುವಾರ ಮಧ್ಯಾಹ್ನ ಇಲ್ಲಿಂದ ತೆರಳಬೇಕಿತ್ತು. ಆದರೆ ಈಗ ಶನಿವಾರ ಸಂಜೆಯೇ ಇಲ್ಲಿಂದ ನ್ಯೂಯಾರ್ಕ್‌ಗೆ ತೆರಳಲಿದ್ದಾರೆ.

`ಆರೋಪ ತರವಲ್ಲ~ (ನ್ಯೂಯಾರ್ಕ್ ವರದಿ):  2ಜಿ ಹಗರಣದ ಸುಳಿಗೆ ಸಿಲುಕಿರುವ ಗೃಹ ಸಚಿವ ಪಿ. ಚಿದಂಬರಂ ಅವರ ರಕ್ಷಣೆಗೆ ಧಾವಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮ, `ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ತರವಲ್ಲ ಮತ್ತು ಅವರು ತಪ್ಪಿತಸ್ಥರು ಎಂಬ ತೀರ್ಮಾನಕ್ಕೆ ಜನರು ಬರಬಾರದು~ ಎಂದು ಹೇಳಿದ್ದಾರೆ.

`ಹಗರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಅಲ್ಲಿ ತೀರ್ಮಾನವಾಗುವುದಕ್ಕೂ ಮುನ್ನವೇ ಅವಸರದ ನಿರ್ಣಯಕ್ಕೆ ಬರುವುದು ಸರಿಯಲ್ಲ ~ ಎಂದು ಹೂಡಿಕೆದಾರರ ವೇದಿಕೆ ಸಭೆಯಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.