ADVERTISEMENT

ಇರಾನ್‌ನಲ್ಲಿ 4ನೇ ವಾರವೂ ಮುಂದುವರಿದ ಪ್ರತಿಭಟನೆ: ಗುಂಡಿಗೆ ಇಬ್ಬರು ಬಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 11:47 IST
Last Updated 9 ಅಕ್ಟೋಬರ್ 2022, 11:47 IST
ಧಾರ್ಮಿಕ ವಸ್ತ್ರಸಂಹಿತೆ ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಲೆಬನಾನ್‌ ರಾಜಧಾನಿ ಬೈರುತನಲ್ಲಿಯೂ ಭಾನುವಾರ ಮಹಿಳೆಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ಧಾರ್ಮಿಕ ವಸ್ತ್ರಸಂಹಿತೆ ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಲೆಬನಾನ್‌ ರಾಜಧಾನಿ ಬೈರುತನಲ್ಲಿಯೂ ಭಾನುವಾರ ಮಹಿಳೆಯರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ಸುಲಿಮಾನಿಯಾ: ಧಾರ್ಮಿಕ ವಸ್ತ್ರಸಂಹಿತೆಯನ್ನು ವಿರೋಧಿಸಿ ಇರಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ವಾರದಲ್ಲಿ ಮುಂದುವರಿದಿದೆ. ಪ್ರತಿಭಟನಕಾರರ ಮೇಲೆ ಭದ್ರತಾ ಸಿಬ್ಬಂದಿ ಗುಂಡುಹಾರಿಸಿದ್ದರಿಂದಾಗಿ ಭಾನುವಾರ ಇಬ್ಬರು ಸತ್ತಿದ್ದಾರೆ.

ಜನರು ಪ್ರಮುಖವಾಗಿ ಮಹಿಳೆಯರು ವಸ್ತ್ರಸಂಹಿತೆ ಕಟ್ಟುಪಾಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಮಹಿಳೆ, ಬದುಕು ಮತ್ತು ಸ್ವಾತಂತ್ರ್ಯ’ ಕುರಿತ ಘೋಷಣೆಗಳು ಸಾಮಾನ್ಯವಾಗಿವೆ. ಈ ಘೋಷಣೆಗಳಿದ್ದ ಭಿತ್ತಿಪತ್ರಗಳು ಪ್ರತಿಭಟನೆ ವೇಳೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ.

ಅಲ್ಲದೆ, ವಿವಿಧೆಡೆ ನಾಗರಿಕರ ಪ್ರತಿಭಟನೆಯನ್ನು ಬೆಂಬಲಿಸಿ ಅಥವಾ ಆಸ್ತಿಪಾಸ್ತಿಗೆ ಹಾನಿ ಆಗುವುದನ್ನು ತಪ್ಪಿಸಲು ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ಅಂಗಡಿ, ವಹಿವಾಟುಗಳನ್ನು ಬಂದ್ ಮಾಡುತ್ತಿದ್ದಾರೆ.

ADVERTISEMENT

ಸನಾನ್‌ದಜ್‌ ಪ್ರದೇಶದಲ್ಲಿಭಾನುವಾರ ಪ್ರತಿಭಟನಕಾರರ ಮೇಲೆ ಗುಂಡುಹಾರಿಸಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ, ಪ್ರತಿಭಟನಕಾರರ ಮೇಲೆ ಗುಂಡು ಪ್ರಯೋಗಿಸಿದ್ದನ್ನು ಪೊಲೀಸರು ನಿರಾಕರಿಸಿದ್ದಾರೆ.

ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮಹಿಳೆಯರ ಅಲ್‌ ಜಾಹ್ರಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಜೊತೆಗೆ ಟೆಹರಾನ್‌ನಲ್ಲಿ ಚರ್ಚಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನೆಯ ಹಿಂದೆಯ ವಿದೇಶಿ ಶಕ್ತಿಗಳ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು.

ಸರ್ಕಾರದ ಅಧಿಕೃತ ಟಿ.ವಿ.ಮಾಧ್ಯಮವನ್ನು ಭಾನುವಾರ ಹ್ಯಾಕ್‌ ಮಾಡಲಾಗಿದ್ದು, ಪ್ರತಿಭಟನೆ ಸುದ್ದಿ 15 ಕ್ಷಣ ಪ್ರಸಾರ ಆಗುವಂತೆ ನೋಡಿಕೊಳ್ಳಲಾಗಿದೆ. ಜ್ವಾಲೆಗಳ ನಡುವೆ ಧಾರ್ಮಿಕ ಮುಖಂಡ ಆಯತ್‌ಉಲ್ಲಾ ಅಲಿ ಖೊಮೆನಿ ಇರುವಂತಹ ಚಿತ್ರವೂ ಪ್ರಸಾರವಾಗಿದೆ.

‘ಏಳಿ ಎದ್ದೇಳಿ. ನಮ್ಮೊಂದಿಗೆ ಕೈಜೋಡಿಸಿ’ ಹಾಗೂ ‘ನಿಮ್ಮ ಹಿಡಿತದಿಂದ ನಮ್ಮ ಯುವಜನರ ರಕ್ತ ಜಿನುಗುತ್ತಿದೆ’ ಎಂಬ ಸಂದೇಶಗಳು ಪ್ರಸಾರ ಆಗಿವೆ.ಮಹಿಳೆ ಅಮೈನಿ ಶಂಕಾಸ್ಪದ ಸಾವಿನ ಬಳಿಕ ವಸ್ತ್ರಸಂಹಿತೆವಿರೋಧಿಸಿ ಸೆ.17ರಿಂದ ಪ್ರತಿಭಟನೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.