ADVERTISEMENT

Los Angeles: ಭೀಕರ ಸ್ಥಿತಿ; 80 ಕಿ.ಮೀ ವೇಗದಲ್ಲಿ ಗಾಳಿ, ಕಾಳ್ಗಿಚ್ಚು,Red Alert

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 4:22 IST
Last Updated 13 ಜನವರಿ 2025, 4:22 IST
   

ಲಾಸ್ ಏಂಜಲೀಸ್(ಅಮೆರಿಕ): ಅಮೆರಿಕದ ಲಾಸ್ ಏಂಜಲೀಸ್‌ಗೆ ವ್ಯಾಪಿಸಿರುವ ಕಾಳ್ಗಿಚ್ಚು ಹತೋಟಿಗೆ ಬರುತ್ತಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಮನೆಗಳು ಸುಟ್ಟು ಕರಕಲಾಗಿದ್ದು, ಭಾರಿ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ.

ಬುಧವಾರದವರೆಗೆ ಕಾಳ್ಗಿಚ್ಚು ಮತ್ತಷ್ಟು ವ್ಯಾಪಿಸುವ ಬಗ್ಗೆ ರಾಷ್ಟ್ರೀಯ ಹವಾಮಾನ ಸೇವೆಯು ರೆಡ್ ಅಲರ್ಟ್ ಘೋಷಿಸಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಪರ್ವತಗಳಲ್ಲಿ ಗಾಳಿ ವೇಗ ಗಂಟೆಗೆ 113 ಕಿ.ಮೀ ತಲುಪುತ್ತಿದೆ. ಲಾಸ್ ಏಂಜಲೀಸ್‌ನಲ್ಲಿ ಮಂಗಳವಾರ ಅತ್ಯಂತ ಅಪಾಯಕಾರಿ ದಿನವಾಗಿರಲಿದೆ ಎಂದು ಹವಾಮಾನ ಸೇವಾ ಕೇಂದ್ರದ ಹವಾಮಾನ ತಜ್ಞ ರಿಚ್ ಥಾಂಪ್ಸನ್ ಹೇಳಿದ್ದಾರೆ.

ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ಕೇಂದ್ರದ ಮುಖ್ಯಸ್ಥ ಆಂಥೋನಿ ಸಿ ಮರ್ರೋನ್ ಅವರು 70 ಹೆಚ್ಚುವರಿ ನೀರಿನ ಟ್ರಕ್‌ಗಳು ಆಗಮಿಸಿದ್ದು, ಬೆಂಕಿ ನಂದಿಸಲು ಸಿಬ್ಬಂದಿಗೆ ನೆರವಾಗುತ್ತಿವೆ ಎಂದು ಹೇಳಿದ್ದಾರೆ.

ADVERTISEMENT

ಕಳೆದ ಎಂಟು ತಿಂಗಳಿಗಿಂತ ಈ ಪ್ರದೇಶದಲ್ಲಿ ಯಾವುದೇ ಗಮನಾರ್ಹ ಮಳೆಯಾಗದ ಕಾರಣ ನಗರದ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣ ಒಣಗಿದ್ದು, ಕಾಳ್ಗಿಚ್ಚು ಹಬ್ಬಲು ಕಾರಣವಾಗಿದೆ.

ಈಟನ್ ಫೈರ್ ವಲಯದಲ್ಲಿ ಹನ್ನೆರಡು ಜನರು ಕಾಣೆಯಾಗಿದ್ದರೆ, ನಾಲ್ವರು ಪಾಲಿಸೇಡ್ಸ್ ಫೈರ್ ಪ್ರದೇಶದಿಂದ ಕಾಣೆಯಾಗಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ರಾಬರ್ಟ್ ಲೂನಾ ಹೇಳಿದ್ದಾರೆ.

ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಮೃತರ ಸಂಖ್ಯೆ 24ಕ್ಕೆ ಏರಿದೆ. ಶ್ವಾನ ದಳಗಳು ಅವಶೇಷಗಳಲ್ಲಿ ಶೋಧ ನಡೆಸುತ್ತಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ನಾಪತ್ತೆಯಾದವರ ಬಗ್ಗೆ ಮಾಹಿತಿ ನೀಡಲು ಕೇಂದ್ರಗಳನ್ನು ತೆರೆಯಲಾಗಿದೆ.

ನಿವಾಸಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಆನ್‌ಲೈನ್ ಡೇಟಾಬೇಸ್ ಸಹ ಸಿದ್ಧಪಡಿಸಲಾಗಿದೆ.

ಪಾಲಿಸೇಡ್ಸ್ ಪ್ರದೇಶದಲ್ಲಿ ಇನ್ನೂ ಬೆಂಕಿ ಸಕ್ರಿಯವಾಗಿದ್ದು, ಇದು ಅಪಾಯಕಾರಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.