ತಹವ್ವುರ್ ರಾಣಾ
– ಪಿಟಿಐ ಚಿತ್ರಗಳು
ವಾಷಿಂಗ್ಟನ್ / ನ್ಯೂಯಾರ್ಕ್: 26/11ರ ಮುಂಬೈ ದಾಳಿಗೆ ಭಾರತೀಯರು ಅರ್ಹರಾಗಿದ್ದರು ಎಂದು ದಾಳಿಯ ಮುಖ್ಯ ರೂವಾರಿ ತಹವ್ವುರ್ ರಾಣಾ ಹೇಳಿದ್ದಾಗಿ ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಅಲ್ಲದೆ ದಾಳಿಯಲ್ಲಿ ಸಾವಿಗೀಡಾದ 9 ಮಂದಿ ಲಷ್ಕರ್–ಎ–ತಯಬಾ ಉಗ್ರರಿಗೆ ಪಾಕಿಸ್ತಾನ ಅತ್ಯುನ್ನತ ‘ನಿಶಾನ್–ಎ–ಹೈದರ್’ ಪುರಸ್ಕಾರ ನೀಡಬೇಕು ಎಂದೂ ಹೇಳಿದ್ದಾಗಿ ಅದು ಮಾಹಿತಿ ನೀಡಿದೆ.
‘ಭಾರತೀಯರು ಈ ದಾಳಿಗೆ ಅರ್ಹರು’ ಎಂದು ಘಟನೆ ನಡೆದ ಬಳಿಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೊಲಮನ್ ಹೆಡ್ಲಿ ಜೊತೆಗೆ ರಾಣಾ ಹೇಳಿದ್ದಾಗಿ ಕಾನೂನು ಇಲಾಖೆಯ ಪ್ರಕಟಣೆ ಹೇಳಿದೆ.
2008ರ ಉಗ್ರ ದಾಳಿ ಸಂಬಂಧ ಪಾಕಿಸ್ತಾನ ಮೂಲದ ಕೆನಡಿಯನ್ ಉದ್ಯಮಿ ರಾಣಾ ಮೇಲೆ ಭಾರತದಲ್ಲಿ 10 ಕ್ರಿಮಿನಲ್ ಪ್ರಕರಣಗಳಿವೆ. ಆತನನ್ನು ಗುರುವಾರ ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿತ್ತು.
‘ಘೋರ ದಾಳಿಯಲ್ಲಿ ಮೃತಪಟ್ಟ ಆರು ಅಮೆರಿಕನ್ನರು ಮತ್ತು ಇತರ ಹಲವಾರು ಮಂದಿಗೆ ನ್ಯಾಯ ದೊರಕಿಸಿಕೊಡುವಲ್ಲಿ ರಾಣಾ ಅವರ ಹಸ್ತಾಂತರವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ’ ಎಂದು ಅಮೆರಿಕ ಹೇಳಿದೆ.
ಎರಡು ವರ್ಷಗಳಿಗೂ ಹೆಚ್ಚು ಚಿಕಾಗೋದಲ್ಲಿ ರಾಣಾನನ್ನು ಪದೇ ಪದೇ ಭೇಟಿಯಾಗಿದ್ದ ಹೆಡ್ಲಿ, ಎಲ್‌ಇಟಿಯ ಚಟುವಟಿಕೆಗಳು, ಹೆಡ್ಲಿಯ ಚಟುವಟಿಕೆಗಳಿಗೆ ಎಲ್‌ಇಟಿಯ ಪ್ರತಿಕ್ರಿಯೆಗಳು ಮತ್ತು ಮುಂಬೈ ಮೇಲೆ ದಾಳಿ ಮಾಡುವ ಎಲ್‌ಇಟಿಯ ಸಂಭಾವ್ಯ ಯೋಜನೆಗಳನ್ನು ವಿವರಿಸಿದ್ದ’ ಎಂದು ಪ್ರಕಟಣೆ ತಿಳಿಸಿದೆ.
ಹೆಡ್ಲಿ ಪಾಕಿಸ್ತಾನದಲ್ಲಿ ಎಲ್‌ಇಟಿ ಸದಸ್ಯರಿಂದ ತರಬೇತಿ ಪಡೆದಿದ್ದ. ಮುಂಬೈ ದಾಳಿ ಯೋಜನೆಗಳ ಬಗ್ಗೆ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಭಾರತ ಆರೋಪಿಸುತ್ತಾ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.