ಅಫ್ಗನ್ ನಿರಾಶ್ರಿತರು
ಪೇಶಾವರ್: ಪಾಕಿಸ್ತಾನದಾದ್ಯಂತ ಅಕ್ರಮ ವಿದೇಶಿ ನಿವಾಸಿಗಳ ವಿರುದ್ಧದ ಕ್ರಮವನ್ನು ತೀವ್ರಗೊಳಿಸಲಾಗಿದ್ದು, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಫ್ಗನ್ ನಿರಾಶ್ರಿತರ 28 ಶಿಬಿರಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಆಂತರಿಕ ಸಚಿವಾಲಯದ ಅಧಿಸೂಚನೆಯ ಪ್ರಕಾರ ಪೆಶಾವರದಲ್ಲಿ ಎಂಟು, ನೌಶೇರಾದಲ್ಲಿ ಮೂರು, ಹಂಗೂನಲ್ಲಿ ಐದು, ಕೊಹತ್‌ನಲ್ಲಿ ನಾಲ್ಕು ಮತ್ತು ಮರ್ದಾನ್‌ನಲ್ಲಿ ಎರಡು ಶಿಬಿರಗಳನ್ನು ಮುಚ್ಚಲಾಗಿದೆ. ಜೊತೆಗೆ ಸ್ವಾಬಿ, ಬುನೆರ್ ಮತ್ತು ದಿರ್ ಜಿಲ್ಲೆಗಳಲ್ಲಿ ಒಟ್ಟು ಆರು ನಿರಾಶ್ರಿತರ ಶಿಬಿರಗಳನ್ನು ಮುಚ್ಚಲಾಗಿದೆ.
ಈ ಹಿಂದೆ ನಿರಾಶ್ರಿತರ ಶಿಬಿರಕ್ಕೆ ನೀಡಲಾಗಿದ್ದ ವಾಹನಗಳು, ಉಪಕರಣಗಳು ಮತ್ತು ಇತರ ಸೌಲಭ್ಯಗಳನ್ನು ಆಯಾ ಜಿಲ್ಲಾಡಳಿತಕ್ಕೆ ಹಿಂತಿರುಗಿಸುವಂತೆ ಸಚಿವಾಲಯವು ಸೂಚಿಸಿದೆ. ಈಗಾಗಲೇ ಮುಚ್ಚಲಾದ ದೇರಾ ಇಸ್ಮಾಯಿಲ್ ಖಾನ್, ತಂಕ್, ಲಕ್ಕಿ ಮರ್ವಾತ್ ಮತ್ತು ಹರಿಪುರ ಜಿಲ್ಲೆಗಳಲ್ಲಿ ಕೂಡ ಇದೇ ರೀತಿಯ ಅಧಿಸೂಚನೆ ಜಾರಿ ಮಾಡಲಾಗಿತ್ತು.
ಪಾಕಿಸ್ತಾನವು ನೋಂದಾಯಿತ 17 ಲಕ್ಷಕ್ಕಿಂತಲೂ ಹೆಚ್ಚಿನ ಅಫ್ಗನ್‌ಗಳಿಗೆ ಆಶ್ರಯ ನೀಡಿದೆ. ಭದ್ರತೆ ಮತ್ತು ಆರ್ಥಿಕ ಕಾರಣಗಳನ್ನು ಉಲ್ಲೇಖಿಸಿ ನಿರಾಶ್ರಿತರನ್ನು ವಾಪಸಾಗುವಂತೆ ಪಾಕಿಸ್ತಾನ ಇತ್ತೀಚೆಗೆ ಅಭಿಯಾನ ಪ್ರಾರಂಬಿಸಿದ್ದು, ಇದರಿಂದಾಗಿ ಸಾವಿರಾರು ಅಫ್ಗನ್ನರು ತಮ್ಮ ದೇಶಕ್ಕೆ ವಾಪಸಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.