ADVERTISEMENT

300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಖರೀದಿಸುವ ಸಾಮರ್ಥ್ಯ ಇಲ್ಲ -ಅಧ್ಯಯನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 6:13 IST
Last Updated 12 ಜುಲೈ 2021, 6:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಸಾಚ್ಯುಸೆಟ್ಸ್‌(ಅಮೆರಿಕ): ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಜೋಳ, ಹಾಲು, ಅವರೆಕಾಯಿ ಮತ್ತು ಇತರ ಸರಕುಗಳಿಗೆ ಬೆಲೆ ಏರಿಕೆಯಾಗಿದೆ. ಆದರೆ ಇದಕ್ಕೂ ಮುನ್ನ ಕೂಡ 300 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯಕರ ಆಹಾರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿಲ್ಲ.

‘ಕಡಿಮೆ ಆದಾಯ ಮತ್ತು ಆರೋಗ್ಯಕರ ಆಹಾರಗಳು ದುಬಾರಿಯಾಗಿದೆ. ಹಾಗಾಗಿ ಜಾಗತಿಕವಾಗಿ ಶೇಕಡ 40ರಷ್ಟು ಜನರು ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯರು ಅಪೌಷ್ಟಿಕತೆ, ರಕ್ತಹೀನತೆ ಮತ್ತು ಮಧುಮೇಹದಂತಹ ಆಹಾರ ಸಂಬಂಧಿತ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ’ ಎಂದು ಜಾಗತಿಕ ಆಹಾರ ಬೆಲೆಯ ಕುರಿತ ಇತ್ತೀಚಿನ ಅಂಕಿಅಂಶಗಳಿಂದ ತಿಳಿದುಬಂದಿದೆ.

ವಿಶ್ವದ 790 ಕೋಟಿ ಜನಸಂಖ್ಯೆಯಲ್ಲಿ ಶೇಕಡ 60ರಷ್ಟು ಜನರು ಆರೋಗ್ಯಕರ ಆಹಾರ ಖರೀದಿಸಬಲ್ಲರು. ಆದರೆ ಅವರು ಅಡುಗೆ ಸಮಯ ಉಳಿಸಲು, ಜಾಹಿರಾತುಗಳಿಗೆ ಮಾರು ಹೋಗಿ ಆರೋಗ್ಯಕರವಲ್ಲದ ಆಹಾರವನ್ನು ಖರೀದಿಸುವ ಸಂದರ್ಭ ಒದಗಬಹುದು ಎಂದು ಹೇಳಲಾಗಿದೆ.

ADVERTISEMENT

174 ದೇಶಗಳ ಸುಮಾರು 800 ಜನಪ್ರಿಯ ಆಹಾರಗಳ ಬೆಲೆಗಳನ್ನು ವಿಶ್ಲೇಷಿಸಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕಿನ ದತ್ತಾಂಶವನ್ನು ಪಡೆಯಲಾಗಿದೆ.

ಅಮೆರಿಕದ ಬಹುತೇಕ ನಾಗರಿಕರು ಅಕ್ಕಿ, ಧಾನ್ಯಗಳು, ಸೊಪ್ಪು, ಹಾಲು ಸೇರಿದಂತೆ ಇತರ ಆರೋಗ್ಯಕರ ಆಹಾರ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಬಹುತೇಕ ಜನರಿಗೆ ಆರೋಗ್ಯಕರ ಆಹಾರ ಖಾದ್ಯಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲ.

ಪರಿಹಾರ ಏನು?

ಹೆಚ್ಚಿನ ವೇತನದ ಉದ್ಯೋಗಗಳ ಸೃಷ್ಟಿ ಮತ್ತು ಕಡಿಮೆ ಆದಾಯ ಗಳಿಸುವ ಜನರಿಗೆ ಸಾಮಾಜಿಕ ರಕ್ಷಣೆ ನೀಡುವ ಮೂಲಕ ರಾಷ್ಟ್ರಗಳು ಪ್ರತಿಯೊಬ್ಬರಿಗೂ ಆರೋಗ್ಯಕರ ಆಹಾರವನ್ನು ಒದಗಿಸಬಹುದು. ಉದಾಹರಣೆಗೆ ಅಮೆರಿಕದಲ್ಲಿ ಪೂರಕ ಪೌಷ್ಟಿಕಾಂಶ ಸಹಾಯ ಕಾರ್ಯಕ್ರಮ ( ಎಸ್‌ಎನ್‌ಎಪಿ) ಯೋಜನೆ ಮೂಲಕ ಕಡಿಮೆ ಆದಾಯದ ಸಂಪಾದಿಸುವ ಜನರಿಗೆ ಆರೋಗ್ಯಕರ ಆಹಾರವನ್ನು ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತದೆ.

ಇತರ ರಾಷ್ಟ್ರಗಳು ಸಹ ಇದೇ ರೀತಿಯ ಯೋಜನೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಪ್ರಜೆಗಳಿಗೆ ನೆರವಾಗಬಹುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.