ADVERTISEMENT

ಷರತ್ತಿನ ಮೇಲೆ ಶಾಂತಿ ಒಪ್ಪಂದ ಮುಂದುವರಿಕೆ: ‘ತಾಲಿಬಾನ್‌ ನಡೆ ಮೇಲೆ ನಿಗಾ’

ಪಿಟಿಐ
Published 3 ಮಾರ್ಚ್ 2020, 19:31 IST
Last Updated 3 ಮಾರ್ಚ್ 2020, 19:31 IST
   

ವಾಷಿಂಗ್ಟನ್‌: ‘ತಾಲಿಬಾನ್‌ ಜತೆಗೆ ಮಾಡಿಕೊಂಡಿರುವ ಶಾಂತಿ ಒಪ್ಪಂದವು ಷರತ್ತು ಬದ್ಧವಾಗಿದೆ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಹೇಳಿದರು.

‘ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ; ಈ ಒಪ್ಪಂದವು ತಾಲಿಬಾನ್‌ ಸಂಘಟನೆಯ ನಡವಳಿಕೆಯ ಮೇಲೆ ಆಧಾರವಾಗಿದೆ. ನಾವು ನಂಬಿಕೆಯ ಮೇಲೆ ನಮ್ಮ ಸೇನೆಯನ್ನು ಹಿಂಪಡೆಯುತ್ತೇವೆ. ಆದರೆ, ಪರಿಸ್ಥಿತಿ ನೋಡಿಕೊಂಡು ನಾವು ಈ ಪ್ರಕ್ರಿಯೆಯನ್ನು ಯಾವಾಗಬೇಕಾದರೂ ನಿಲ್ಲಿಸಬಹುದು ಅಥವಾ ತಡೆಹಿಡಿಯಬಹುದು’ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಒಪ್ಪಂದದಂತೆ ತಾಲಿಬಾನ್‌ ಸಂಘಟನೆ ನಡೆದುಕೊಳ್ಳುತ್ತದೊ, ಇಲ್ಲವೊ ಎನ್ನುವುದನ್ನು ಅಮೆರಿಕ ತುಂಬಾ ಹತ್ತಿರದಿಂದ ಗಮನಿಸುತ್ತಿದೆ’ ಎಂದರು.

ADVERTISEMENT

‘ಈ ಒಪ್ಪಂದದಿಂದಾಗಿ ಅಫ್ಗಾನಿಸ್ತಾನವು ಮತ್ತೊಮ್ಮೆ ಉಗ್ರರಿಗೆ ಸ್ವರ್ಗವಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ಇಚ್ಛಿಸುತ್ತೇನೆ. ಅಫ್ಗಾನಿಸ್ತಾನದಲ್ಲಿ ಯುದ್ಧವನ್ನು ಕೊನೆಗಾಣಿಸಲು ರಾಜಕೀಯ ಪರಿಹಾರಾತ್ಮಕ ಮಾರ್ಗದಲ್ಲಿ ಈ ಒಪ್ಪಂದವು ಪ್ರಮುಖವಾದ ಹೆಜ್ಜೆಯಾಗಿದೆ’ ಎಂದು ಅವರು ಪುನರುಚ್ಚರಿಸಿದರು.

‘ಕಳೆದ 18 ವರ್ಷಗಳ ನಮ್ಮ ಬಲಿದಾನದಿಂದಾಗಿ ಈ ಒಪ್ಪಂದ ಏರ್ಪಡಲು ಸಾಧ್ಯವಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಅಮೆರಿಕದ ಪುತ್ರರು ಮತ್ತು ಪುತ್ರಿಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಅಮೆರಿಕ ರಕ್ಷಣಾ ಇಲಾಖೆ ಸಿಬ್ಬಂದಿಯ ಜಂಟಿ ಮುಖ್ಯಸ್ಥ ಜೆನ್‌ ಮಾರ್ಕ್‌ ಮಿಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.