ADVERTISEMENT

ಉಕ್ರೇನ್‌ ವಿದೇಶಾಂಗ ಸಚಿವ ಕುಲೆಬಾ ರಾಜೀನಾಮೆ

ಏಜೆನ್ಸೀಸ್
Published 4 ಸೆಪ್ಟೆಂಬರ್ 2024, 16:03 IST
Last Updated 4 ಸೆಪ್ಟೆಂಬರ್ 2024, 16:03 IST
<div class="paragraphs"><p>ಡಿಮಿಟ್ರಿ ಕುಲೆಬಾ</p></div>

ಡಿಮಿಟ್ರಿ ಕುಲೆಬಾ

   

– ಪಿಟಿಐ ಚಿತ್ರ

ಕೀವ್‌: ಸರ್ಕಾರ ಪುನರ್‌ರಚನೆಗೂ ಮುಂಚಿತವಾಗಿ ಮಂಗಳವಾರ ತಡರಾತ್ರಿ ನಾಲ್ವರು ಸಂಪುಟ ಸಚಿವರು ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಕೂಡ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.

ADVERTISEMENT

ಐರೋಪ್ಯ ವ್ಯವಹಾರಗಳ ಉಪ ಪ್ರಧಾನಿ ಓಲ್ಗಾ ಸ್ಟೆಫಾನಿಶಿನಾ, ರಕ್ಷಣಾ ಕೈಗಾರಿಕೆಗಳ ಸಚಿವ ಒಲೆಕ್ಸಾಂಡರ್ ಕಮಿಶಿನ್, ನ್ಯಾಯ ಸಚಿವ ಡೆನಿಸ್ ಮಾಲಿಯುಸ್ಕಾ ಮತ್ತು ಪರಿಸರ ಸಚಿವ ರುಸ್ಲಾನ್ ಸ್ಟ್ರೈಲೆಟ್ಸ್ ರಾಜಿನಾಮೆ ಸಲ್ಲಿಸಿದ ಸಂಪುಟ ಸಚಿವರು ಎಂದು ಸ್ಪೀಕರ್ ಕಚೇರಿ ತಿಳಿಸಿದೆ.

ರಾಜೀನಾಮೆಯ ಪ್ರಸ್ತಾಪಗಳಿಗೆ ಸರ್ಕಾರದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಕ್ಯಾಬಿನೆಟ್ ಪುನರ್‌ರಚನೆಯು ಸನ್ನಿಹಿತವಾಗಿದೆ ಎಂದು ಕಳೆದ ವಾರ ಹೇಳಿದ್ದರು. ಅಲ್ಲದೆ, ಸಂಸತ್ತಿನಲ್ಲಿ ಅವರ ಪಕ್ಷದ ಮುಖ್ಯಸ್ಥರು, ಪ್ರಸ್ತುತ ಅರ್ಧದಷ್ಟು ಮಂತ್ರಿಗಳನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಮಂಗಳವಾರವಷ್ಟೇ ಹೇಳಿಕೆ ನೀಡಿದ್ದರು.

ಇನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಉಕ್ರೇನ್‌ನ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದ ವಿದೇಶಾಂಗ ಸಚಿವ ಡಿಮಿಟ್ರಿ ಕುಲೆಬಾ ಅವರ ರಾಜೀನಾಮೆ ಕೂಡ ಅಚ್ಚರಿ ಮೂಡಿಸಿದೆ. 43 ವರ್ಷದ ಕುಲೇಬಾ ಅವರು ರಾಜೀನಾಮೆಗೆ ಕಾರಣ ನೀಡಲಿಲ್ಲ. ಅವರ ರಾಜೀನಾಮೆ ಬಗ್ಗೆ ಮುಂದಿನ ಅಧಿವೇಶನದಲ್ಲಿ ಸಂಸದರು ಚರ್ಚಿಸಲಿದ್ದಾರೆ ಎಂದು ಸ್ಪೀಕರ್ ರುಸ್ಲಾನ್ ಸ್ಟೆಫಾಂಚುಕ್ ‘ಫೇಸ್‌ಬುಕ್’ನಲ್ಲಿ ತಿಳಿಸಿದ್ದಾರೆ. 

ಏತನ್ಮಧ್ಯೆ, ಪಶ್ಚಿಮ ಉಕ್ರೇನ್‌ನ ಲುವಿವ್‌ ನಗರದ ಮೇಲೆ ರಷ್ಯಾ ನಡೆಸಿದ ದಾಳಿಗಳಲ್ಲಿ ಏಳು ಜನರು ಹತರಾಗಿದ್ದಾರೆ. ಯುದ್ಧ ಪ್ರಾರಂಭವಾದ ದೀರ್ಘ ಸಮಯದ ನಂತರ ಪೋಲ್ಟವಾ ನಗರದ ಮೇಲೆ ಮಂಗಳವಾರ ನಸುಕಿನಲ್ಲಿ ತಡರಾತ್ರಿ ಎರಡು ಗುರಿ ನಿರ್ದೇಶಿತ ಕ್ಷಿಪಣಿ ದಾಳಿ ನಡೆದಿತ್ತು. ಈ ಭೀಕರ ದಾಳಿಯಲ್ಲಿ 53 ಜನರು ಹತರಾಗಿದ್ದರು.

ಇದರ ಮರು ದಿನವೇ ರಷ್ಯಾ ಸೇನೆ ಲುವಿವ್‌ ಮೇಲೆ ಮಾರಕ ದಾಳಿ ಮಾಡಿದೆ. ರಕ್ಷಣಾ ಉದ್ಯಮಗಳನ್ನು ಗುರಿಯಾಗಿಸಿಕೊಂಡು ಕಿಂಜಾಲ್‌ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಲಾಗಿದೆ. 52 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ರಕ್ಷಣಾ ಸೇವೆ ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.