ADVERTISEMENT

40 ಶತಕೋಟಿ ಡಾಲರ್ ಆಸ್ತಿ...!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 15:55 IST
Last Updated 4 ಫೆಬ್ರುವರಿ 2011, 15:55 IST

 ಕೈರೊ (ಪಿಟಿಐ): ಜನರ ಆಕ್ರೋಶಕ್ಕೆ ಗುರಿಯಾಗಿರುವ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಹಾಗೂ ಅವರ ಕುಟುಂಬದ ಅಕ್ರಮ ಆಸ್ತಿ ಸಂಪಾದನೆ ಕಣ್ಣು ಕುಕ್ಕುವಂತಿದ್ದು, ಅದು 40 (ಅಂದಾಜು 2 ಲಕ್ಷ ಕೋಟಿ ರೂಪಾಯಿ) ರಿಂದ 70 (3.5 ಲಕ್ಷ ಕೋಟಿ ರೂಪಾಯಿ) ಶತಕೋಟಿ ಡಾಲರ್‌ನಷ್ಟಿರಬಹುದೆಂದು ಅಂದಾಜಿಸಲಾಗಿದೆ.

ಮುಬಾರಕ್ ಮುಂಚೆ ವಾಯುಪಡೆ ಅಧಿಕಾರಿಯಾಗಿದ್ದಾಗಲೇ ಸೇನಾ ಒಪ್ಪಂದಗಳ ಮೂಲಕ ಅಕ್ರಮ ಹಣ ಸಂಪಾದನೆ ಆರಂಭಿಸಿದ್ದರು. ಆಮೇಲೆ 1981ರಲ್ಲಿ ರಾಷ್ಟ್ರಾಧ್ಯಕ್ಷರಾದ ನಂತರ ಅವರು ವಿವಿಧ ಕ್ಷೇತ್ರಗಳಿಗೆ ತಮ್ಮ ಹೂಡಿಕೆಯನ್ನು ವಿಸ್ತರಿಸಿದರು ಎಂಬ ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

ಕೊಲ್ಲಿ ರಾಷ್ಟ್ರಗಳ ನಾಯಕರ ಬಳಿ ಇರುವಷ್ಟೇ ಸಂಪತ್ತು ಮುಬಾರಕ್ ಬಳಿಯೂ ಇದೆ. ತಮ್ಮ ಆಡಳಿತಾವಧಿಯಲ್ಲಿ ಅವರು ಭಾರಿ ಭ್ರಷ್ಟಾಚಾರ ಎಸಗಿರುವ ಜತೆಗೆ ಸಾರ್ವಜನಿಕ ಸಂಪನ್ಮೂಲವನ್ನು ವೈಯಕ್ತಿಕ ಗಳಿಕೆಗೆ ಮಿತಿಮೀರಿ ಬಳಸಿಕೊಂಡಿದ್ದಾರೆ ಎನ್ನುತ್ತಾರೆ ಪ್ರಿನ್ಸ್‌ಟನ್‌ನಲ್ಲಿ ರಾಜ್ಯಶಾಸ್ತ್ರದ ಆಗಿರುವ ಪ್ರೊ ಅಮಾನಿ ಜಮಾಲ್.

ADVERTISEMENT

ಈ ಅಕ್ರಮ ಗಳಿಕೆಯ ಬಹುಪಾಲು ಈಜಿಪ್ಟ್‌ನ ಹೊರಗೆ, ಅಂದರೆ ಬ್ರಿಟನ್ ಮತ್ತು ಸ್ವಿಟ್ಜರ್‌ಲೆಂಡ್‌ಗಳಲ್ಲಿ ಇರುವ ಸಾಧ್ಯತೆ ಇದೆ. ರಾಜಕೀಯ ಸ್ಥಿತ್ಯಂತರಗಳ ಸಂದರ್ಭದಲ್ಲಿ ತಮ್ಮ ಸಂಪತ್ತು ಮುಟ್ಟುಗೋಲಾಗಬಾರದೆಂಬ ಕಾರಣಕ್ಕೆ ಮಧ್ಯಪ್ರಾಚ್ಯದ ಬಹುತೇಕ ನಾಯಕರು ಹಣವನ್ನು ವಿದೇಶಗಳಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.

ಲಂಡನ್, ಪ್ಯಾರಿಸ್, ಮ್ಯಾಡ್ರಿಡ್, ದುಬೈ, ವಾಷಿಂಗ್ಟನ್, ನ್ಯೂಯಾರ್ಕ್, ಫ್ರಾಂಕ್‌ಫರ್ಟ್ ಸೇರಿದಂತೆ ಜಗತ್ತಿನ ಹಲವು ಪ್ರಮುಖ ನಗರಗಳಲ್ಲಿ ಮುಬಾರಕ್ ಕುಟುಂಬ ಆಸ್ತಿ ಹೊಂದಿದೆ ಎಂದು   ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.