ADVERTISEMENT

ಅಮೆರಿಕದಲ್ಲಿ ಕಾಳ್ಗಿಚ್ಚು: 400 ಕುಟುಂಬಗಳ ಸ್ಥಳಾಂತರ

ಏಜೆನ್ಸೀಸ್
Published 30 ಮಾರ್ಚ್ 2021, 6:18 IST
Last Updated 30 ಮಾರ್ಚ್ 2021, 6:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೌತ್‌ಡಕೋಟಾ: ಅಮೆರಿಕದ ಸೌತ್‌ ಡಕೋಟಾ ರಾಜ್ಯದ ಬ್ಲ್ಯಾಕ್‌ ಹಿಲ್ಸ್‌ ಪ್ರದೇಶದಲ್ಲಿ ಮೂರು ಕಡೆಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, 400ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಹಾಗೂ ಮೌಂಟ್‌ ರಶ್‌ಮೋರ್‌ ರಾಷ್ಟ್ರೀಯ ಸ್ಮಾರಕವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರ‍್ಯಾಪಿಡ್ ಸಿಟಿಯ ವಾಯವ್ಯ ಭಾಗದಿಂದ 24 ಕಿ.ಮೀ ದೂರವಿರುವ ನೆಮೊ ಪ್ರದೇಶದ ಶೋಯಿಡೆರ್‌ ರಸ್ತೆಯ ಬಳಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಆ ಬೆಂಕಿಯ ಕೆನ್ನಾಲಿಗೆ ಒಂದೂವರೆ ಮೈಲಿಗಳವರೆಗೆ ವ್ಯಾಪಿಸಿಕೊಂಡಿತು. ಸೋಮವಾರ ಮಧ್ಯಾಹ್ನದ ನಂತರವೂ ಬೆಂಕಿಯ ಕೆನ್ನಾಲಿಗೆ ವಿಸ್ತರಿಸುತ್ತಿರುವುದು ಮುಂದುವರಿಯಿತು ಎಂದುಪೆನ್ನಿಂಗ್‌ಟನ್‌ ಕೌಂಟಿಯ ಷರೀಫ್ಸ್‌ ಕಚೇರಿ ತಿಳಿಸಿದೆ.

‘ಈ ಬೆಂಕಿ ಅನಾಹುತದಲ್ಲಿ ಎರಡು ಮನೆಗಳು ನಾಶವಾಗಿರುವ ಸಾಧ್ಯತೆ ಇದೆ. ಕೆಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಆದರೆ, ಯಾವುದೇ ಸಾವು ನೋವುಗಳು ಸಂಭವಿಸಿಲ್ಲ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುಮಾರು 250 ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದರು. ಇದೇ ವೇಳೆಗೆ ಗಂಟೆಗೆ 50 ಕಿ.ಮೀ ನಿಂದ 70 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯಿಂದಾಗಿ ಬೆಂಕಿ ವ್ಯಾಪಕವಾಗಿ ಹರಡುವಂತಾಯಿತು ಎಂದು ‘ರ‍್ಯಾಪಿಡ್ ಸಿಟಿ ಜರ್ನಲ್’ ವರದಿ ಮಾಡಿದೆ.

ಇದೇ ವೇಳೆ ರ್‍ಯಾಪಿಡ್ ನಗರದ ನೈರುತ್ಯ ದಿಕ್ಕಿನಲ್ಲಿ ಇಂಥದ್ದೇ ಇನ್ನೆರಡು ಕಾಳ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ಒಂದು ಭಾಗದಲ್ಲಿ ಸುಮಾರು 30.35 ಹೆಕ್ಟೇರ್ ಮತ್ತು ಇನ್ನೊಂದು ಭಾಗದಲ್ಲಿ 8.09 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.