ADVERTISEMENT

ಇರಾನ್‌ನಲ್ಲಿ ಶಸ್ತ್ರಸಜ್ಜಿತರಿಂದ ಗುಂಡಿನ ದಾಳಿ: ಐವರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2022, 2:48 IST
Last Updated 17 ನವೆಂಬರ್ 2022, 2:48 IST
   

ಟೆಹರಾನ್‌: ಇಲ್ಲಿನ ಇಝೆಹ್‌ನಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದು 10 ಮಂದಿ ಗಾಯಗೊಂಡಿದ್ದಾರೆ.

ಬುಧವಾರ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ಶಸ್ತ್ರಸಜ್ಜಿತ ದಾಳಿಕೋರರು ಖುಜೆಸ್ತಾನ್ ಪ್ರಾಂತ್ಯದ ಇಝೆಹ್‌ನ ಕೇಂದ್ರ ಮಾರುಕಟ್ಟೆಯಲ್ಲಿ ಬಂದೂಕಿನಿಂದ ನಾಗರೀಕರು ಮತ್ತು ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದಾಳಿಯಲ್ಲಿ ಮೂರು ಯುವಕರು, ಓರ್ವ ಬಾಲಕಿ ಹಾಗೂ ಪುರುಷರೊಬ್ಬರು ಸಾವಿಗೀಡಾಗಿದ್ದಾರೆ. ಗಾಯಗೊಂಡ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಖುಜೆಸ್ತಾನ್‌ನ ಭದ್ರತಾ ವ್ಯವಹಾರಗಳ ಉಪ ಗವರ್ನರ್ ವಲಿಯೊಲ್ಲಾ ಹಯಾತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ADVERTISEMENT

ಶೋಧ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು ಭಯೋತ್ಪಾದಕ ದಾಳಿಯ ಹಿಂದಿರುವವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ. ದಾಳಿಕೋರರು ಕಲಾಶ್ನಿಕೋವ್ ಬಂದೂಕು ಹೊಂದಿದ್ದರು ಎಂದು ಮತ್ತೊಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ. ಇದುವರೆಗೂ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.