ಪ್ಯಾರಿಸ್: 2007ರ ಅಧ್ಯಕ್ಷೀಯ ಚುನಾವಣೆಗೆ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಢಾಫಿಯಿಂದ ಹಣಕಾಸು ಸಹಾಯ ಪಡೆದ ಆರೋಪ ಸಾಬೀತಾದ ಕಾರಣ ಇಲ್ಲಿನ ನ್ಯಾಯಾಲಯವು ಗುರುವಾರ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದೇ ವೇಳೆ ಅವರ ಮೇಲಿದ್ದ ಇತರ ಮೂರು ಆರೋಪಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
2007ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ಲಿಬಿಯಾದಿಂದ ಆರ್ಥಿಕ ನೆರವು ಪಡೆಯಲು ಸರ್ಕೋಜಿ ಅವರು ತಮ್ಮ ಆಪ್ತರಿಗೆ ಅವಕಾಶ ನೀಡಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆದರೆ ಈ ಹಣವನ್ನು ಚುನಾವಣೆಯಲ್ಲಿ ಬಳಸಲಾಗಿದೆ ಎಂಬುವುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ.
ಈ ಪ್ರಕರಣದಲ್ಲಿ ಸರ್ಕೋಜಿ ಆಪ್ತರಾದ ಕ್ಲೌಡ್ ಗುಯೆಂಟ್ ಮತ್ತು ಬ್ರೈಸ್ ಹಾರ್ಟೆಫ್ಯೂಕ್ಸ್ ಕೂಡ ತಪ್ಪಿತಸ್ಥರಾಗಿದ್ದಾರೆ. ಮತ್ತೋರ್ವ ಆರೋಪಿ ಉದ್ಯಮಿ ಜಿಯಾದ್ ಟಕಿಯಿದ್ದೀನ್ ವಿಚಾರಣಾ ಹಂತದಲ್ಲಿ ನಿಧನರಾಗಿದ್ದಾರೆ.
2011ರಲ್ಲಿ ಸರ್ಕೋಜಿ ಅವರ ಚುನಾವಣಾ ಪ್ರಚಾರಕ್ಕೆ ಹಣಕಾಸು ಒದಗಿಸಿದ್ದಾಗಿ ಗಡಾಫಿ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಈ ಆರೋಪವನ್ನು ಅಲ್ಲಗೆಳೆದಿದ್ದ ಸರ್ಕೋಜಿ, ರಾಜಕೀಯ ಪ್ರೇರಿತ ಎಂದು ಕರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.