ADVERTISEMENT

ನಾಲ್ಕು ಬಿಸಿ ಬಿಸಿ ‘ಗುರು’ ಗ್ರಹಗಳ ಪತ್ತೆ !

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ನಾಲ್ಕು ಬಿಸಿ ಬಿಸಿ ‘ಗುರು’ ಗ್ರಹಗಳ ಪತ್ತೆ !
ನಾಲ್ಕು ಬಿಸಿ ಬಿಸಿ ‘ಗುರು’ ಗ್ರಹಗಳ ಪತ್ತೆ !   

ಬರ್ಲಿನ್‌: ಸುಮಾರು 2300 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕುಬ್ಜ ನಕ್ಷತ್ರಗಳ ಸುತ್ತ ಪರಿಭ್ರಮಣ ನಡೆಸುತ್ತಿರುವ ನಾಲ್ಕು ಅಧಿಕ ತಾಪದ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇವು ನಮ್ಮ ಸೌರಮಂಡಲದ ಗುರು ಗ್ರಹವನ್ನು ಹೋಲುತ್ತವೆ.

ವಿಜ್ಞಾನಿಗಳು ಇದಕ್ಕೆ ‘ಬಿಸಿ ಗುರು’ (ಹಾಟ್‌ ಜುಪಿಟರ್‌) ಎಂದು ಕರೆದಿದ್ದಾರೆ. ತಾಪದಿಂದ ಕೂಡಿದ ಈ ಗ್ರಹಗಳನ್ನು ಹಂಗೇರಿ ನಿರ್ಮಿತ ಸ್ವಯಂ ಚಾಲಿತ ಟೆಲಿಸ್ಕೋಪ್‌ ಜಾಲ (ಎಚ್‌ಎಟಿ ಸೌತ್) ಪತ್ತೆ ಮಾಡಿವೆ. ಇವು ಅನುಕ್ರಮದಲ್ಲಿರುವ ನಾಲ್ಕು ಕುಬ್ಜ ನಕ್ಷತ್ರಗಳಿಗೆ ಸುತ್ತುತ್ತಿವೆ. ಈ ನಕ್ಷತ್ರಗಳಿಗೆ ಎಚ್‌ಎಟಿಎಸ್‌–50, ಎಚ್‌ಎಟಿಎಸ್‌–51, ಎಚ್‌ಎಟಿಎಸ್‌–52 ಮತ್ತು ಎಚ್‌ಎಟಿಎಸ್‌–53 ಎಂದು ಹೆಸರಿಸಲಾಗಿದೆ.

‘ನಮ್ಮ ಸೌರ ಮಂಡಲದ ಆಚೆಗೆ ಒಂದರ ಸನಿಹ ಮತ್ತೊಂದು ಸಾಗುತ್ತಿರುವ ನಾಲ್ಕು ನಕ್ಷತ್ರಗಳನ್ನು ಪತ್ತೆ ಮಾಡಿದ್ದೇವೆ. ಇದಕ್ಕಾಗಿ ಎಚ್‌ಎಟಿ ಸೌತ್‌ ಮೂರು ಖಂಡಗಳಲ್ಲಿರುವ ಏಕರೂಪದ ಮತ್ತು ಸ್ವಯಂಚಾಲಿತ ದೂರದರ್ಶಕ ಜಾಲವನ್ನು ಬಳಸಿದ್ದೇವೆ’ ಎಂದು ಸಂಶೋಧನಾ ತಂಡದ ನಾಯಕ ಜರ್ಮನಿಯ ಮ್ಯಾಕ್ಸ್‌ ಪ್ಲಾಂಕ್‌ ಇನ್ಸ್‌ಟಿಟ್ಯೂಟ್‌ ಫಾರ್‌ ಆಸ್ಟ್ರೊನಮಿಯ ಥಾಮಸ್‌ ಹೆನ್ನಿಂಗ್‌ ಹೇಳಿದ್ದಾರೆ.

ADVERTISEMENT

‘ಎಲ್ಲ ನಾಲ್ಕು ಗ್ರಹಗಳು ಸೌರ ಮಂಡಲದ ಗುರು ಗ್ರಹದ ಸಮಾನ ಗುಣಲಕ್ಷಣಗಳನ್ನು ಹೊಂದಿವೆ. ಇವುಗಳ ಪರಿಭ್ರಮಣ ಅವಧಿ 10 ದಿನಕ್ಕೂ ಕಡಿಮೆ. ಇವುಗಳ ಮೇಲ್ಮೈ ಅಧಿಕ ತಾಪಮಾನದಿಂದ ಕೂಡಿದೆ. ಮಾತೃ ನಕ್ಷತ್ರಕ್ಕೆ ಅತಿ ಸನಿಹದಲ್ಲಿ ಇರುವುದರಿಂದ ತಾಪಮಾನ ಅಧಿಕವಾಗಿರಲು ಕಾರಣ. ಕುಬ್ಜ ನಕ್ಷತ್ರಗಳ ಸರಣಿಯಲ್ಲಿ ಎಚ್‌ಎಟಿಎಸ್‌–50 ಅತ್ಯಂತ ಚಿಕ್ಕದು ಮತ್ತು ಉಳಿದವುಗಳಿಗಿಂತ ಭಿನ್ನವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಸರಣಿಯಲ್ಲಿ ಎಚ್‌ಎಟಿಎಸ್‌–51 ಬಿ ಅತ್ಯಂತ ದೊಡ್ಡದ್ದು. ಇದು ತನ್ನ ಕಕ್ಷೆಯಲ್ಲಿ ಸುತ್ತಲು 3.35 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಭೂಮಿಯಿಂದ 1560 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.