ADVERTISEMENT

ಪಾಕ್‌ ವಿರುದ್ಧ ವಿಭಿನ್ನ ಕ್ರಮಕ್ಕೆ ಚಿಂತನೆ

‘ಉಗ್ರರ ತಾಣ’ ಪಾಕಿಸ್ತಾನ: ಅಮೆರಿಕ ನೀತಿ ವಿವರಿಸಿದ ಹಿರಿಯ ಅಧಿಕಾರಿ

ಪಿಟಿಐ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ವಾಷಿಂಗ್ಟನ್ : ‘ಪಾಕಿಸ್ತಾನವು ಭಯೋತ್ಪಾದಕರ ಸುರಕ್ಷಿತ ತಾಣ ಆಗುವುದನ್ನು ತಡೆಯಲು ‘ಏನಾದರೂ ಬೇರೆ ರೀತಿಯ ಕ್ರಮ’ ಕೈಗೊಳ್ಳುವ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಾಕಷ್ಟು ನೆರವು ನೀಡಿದ ನಂತರವೂ ಭಯೋತ್ಪಾದನೆ ನಿಗ್ರಹಿಸಲು ಪಾಕಿಸ್ತಾನ ವಿಫಲವಾಗಿದೆ ಎಂಬ ಕಾರಣಕ್ಕೆ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ. ಭದ್ರತೆ ಉದ್ದೇಶಕ್ಕೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ಅನುದಾನವನ್ನು ಟ್ರಂಪ್ ಆಡಳಿತ ರದ್ದುಗೊಳಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

‘ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಭಯೋತ್ಪಾದಕರಿಗೆ ಪಾಕಿಸ್ತಾನ ಅಥವಾ ಅಫ್ಗಾನಿಸ್ತಾನ ನಿರಂತರ ಬೆಂಬಲ ನೀಡುತ್ತಲೇ ಬಂದಿವೆ. ಇದನ್ನು ತಡೆಯಲು ಅಮೆರಿಕ ಬದ್ಧವಾಗಿದೆ. ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕದ ಈ ಹಿಂದಿನ ಸರ್ಕಾರ‌ಗಳು ಸಾಕಷ್ಟು ನೆರವು ನೀಡಿದವು. ತಾಳ್ಮೆಯಿಂದ ವರ್ತಿಸಿದವು. ಇದು ಯಶಸ್ವಿಯಾಗಿಲ್ಲ. ಪಾಕಿಸ್ತಾನ ಸರ್ಕಾರ ಮತ್ತು ಉಗ್ರ ಸಂಘಟನೆಗಳ ನಡುವೆ ಬಾಂಧವ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಅಫ್ಗಾನಿಸ್ತಾನದಂತೆಯೇ ಪಾಕಿಸ್ತಾನವನ್ನೂ ಪರಿಗಣಿಸುವುದು ಟ್ರಂಪ್ ಅವರ ಹೊಸ ನೀತಿಯ ಉದ್ದೇಶವಲ್ಲ. ಅಮೆರಿಕದ ಭವಿಷ್ಯ ಹಾಗೂ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವುದು ಗುರಿ’ ಎಂದು ಅವರು ಹೇಳಿದ್ದಾರೆ. ಆದರೆ, ಅಮೆರಿಕದ ಆಪಾದನೆಯನ್ನು ಪಾಕಿಸ್ತಾನ ಅಲ್ಲಗಳೆದಿದೆ.

ಇಸ್ಲಾಮಾಬಾದ್ ವರದಿ: ‘ತಾಲಿಬಾನೀಯರ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ವಿಫಲವಾದರೆ ಅದು ಇಡೀ ಪ್ರದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ತಾಲಿಬಾನಿ ಸಂಘಟನೆ ಇನ್ನಷ್ಟು ಬಲ ಪಡೆದುಕೊಳ್ಳುತ್ತದೆ ಎಂದು ಅಮೆರಿಕದ ಸಂಧಾನಕಾರರಿಗೆ ಪಾಕಿಸ್ತಾನ ಹೇಳಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಹಖ್ಖಾನಿ ಗುಂಪು ಸೇರಿದಂತೆ ಉಗ್ರ ಸಂಘಟನೆಗಳನ್ನು ಮಣಿಸಲು ಸಹಕರಿಸುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮಾಟಿಸ್ ಪಾಕಿಸ್ತಾನವನ್ನು ಕೋರಿದ್ದರು. ಈ ವೇಳೆ ಪಾಕಿಸ್ತಾನ ತನ್ನ ಆತಂಕವನ್ನು ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.