ADVERTISEMENT

ವಿಜಯ್‌ ಮಲ್ಯಗೆ ಏ. 2ರವರೆಗೆ ಜಾಮೀನು

ಹಸ್ತಾಂತರ ಪ್ರಕರಣ: ಇನ್ನೂ ಮುಗಿಯದ ವಾದ

ಪಿಟಿಐ
Published 12 ಜನವರಿ 2018, 19:30 IST
Last Updated 12 ಜನವರಿ 2018, 19:30 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ಲಂಡನ್‌ : ಉದ್ಯಮಿ ವಿಜಯ ಮಲ್ಯ ಅವರಿಗೆ ಏಪ್ರಿಲ್‌ 2ರವರೆಗೆ ಇಲ್ಲಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹಸ್ತಾಂತರಕ್ಕೆ ಪ್ರಕರಣದಲ್ಲಿ ಸಂಬಂಧಿಸಿದಂತೆ ಭಾರತ ಸರ್ಕಾರದ ಸಲ್ಲಿಸಿದ ಸಾಕ್ಷ್ಯಗಳ ಬಗ್ಗೆ ಪ್ರತಿವಾದಿ ವಕೀಲರ ವಾದಗಳನ್ನು ಆಲಿಸಿದ ಇಲ್ಲಿನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡಿದರು.

ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಡಿಸೆಂಬರ್‌ 4ರಿಂದ ವಿಚಾರಣೆ ಆರಂಭವಾಗಿದೆ. 2016ರ ಮಾರ್ಚ್‌ನಲ್ಲಿ ಭಾರತ ತೊರೆದು ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ ವಿರುದ್ಧದ ವಂಚನೆ ಪ್ರಕರಣದ ವಿಚಾರಣೆಯೂ ಇಲ್ಲಿ ನಡೆಯಲಿದೆ.

ADVERTISEMENT

ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಾರಂಟ್‌ ಜಾರಿಯಾದ ಬಳಿಕ 2017ರ ಏಪ್ರಿಲ್‌ನಲ್ಲಿ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಮಲ್ಯ ಅವರನ್ನು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ನ್ಯಾಯಾಲಯಕ್ಕೆ ಹಾಜರಾದ ಮಲ್ಯ ಅವರ ವಿಚಾರಣೆ ಗುರುವಾರವೇ ಮುಗಿಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರ ಪರ ವಕೀಲರು ವಾದವನ್ನು ಇನ್ನಷ್ಟೇ ಪೂರ್ಣಗೊಳಿಸಬೇಕಿದೆ.

ಭಾರತ–ಬ್ರಿಟನ್‌ ನಡುವಣ ಪರಸ್ಪರ ಕಾನೂನು ನೆರವು ಒಪ್ಪಂದ(ಎಂಎಲ್‌ಎಟಿ)ದ ಅಡಿಯಲ್ಲಿ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಮನವಿ ಮಾಡಿತ್ತು. ಅದನ್ನು ಬ್ರಿಟನ್ ಸರ್ಕಾರ ಪುರಸ್ಕರಿಸಿದ್ದು, ಹಸ್ತಾಂತರಿಸುವ ಕುರಿತು ವಿಚಾರಣೆ ನಡೆಯುತ್ತಿದೆ.

ವಿಚಾರಣೆ ಪೂರ್ಣಗೊಂಡ ನಂತರ ತೀರ್ಪು ಭಾರತ ಸರ್ಕಾರದ ಪರವಾಗಿ ಬಂದರೆ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ ಗೃಹ ಕಾರ್ಯದರ್ಶಿಗಳಿಗೆ ಎರಡು ತಿಂಗಳ ಕಾಲಾವಕಾಶ ಇರುತ್ತದೆ.

ಇದೂ ಅಲ್ಲದೆ ಮುಖ್ಯ ನ್ಯಾಯಾಧೀಶರ ತೀರ್ಪಿನ ವಿರುದ್ದ ಬ್ರಿಟನ್‌ನ ಉನ್ನತ ನ್ಯಾಯಾಲಯಗಳಿಗೆ ಮೊರೆ ಹೋಗಲು ಭಾರತ ಸರ್ಕಾರ ಮತ್ತು ಮಲ್ಯ ಅವರಿಗೆ ಅವಕಾಶವಿದೆ.

ತೃಪ್ತಿಕರ: ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತ ಸಲ್ಲಿಸಿರುವ ಸಾಕ್ಷ್ಯಗಳು ಸರಿಯಾಗಿವೆ ಮತ್ತು ಈ ವಿಷಯದ ಬಗ್ಗೆ ಬ್ರಿಟನ್‌ ಸರ್ಕಾರ ನೀಡುತ್ತಿರುವ ಸಹಕಾರ ತೃಪ್ತಿಕರವಾಗಿದೆ ಎಂದು ಭದ್ರತೆಗೆ ಸಂಬಂಧಿಸಿದಂತೆ ಮಾತುಕತೆಗೆ ಲಂಡನ್‌ನಲ್ಲಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದ್ದಾದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.