ADVERTISEMENT

ಮನೆಯಲ್ಲೇ ಕುಳಿತು ಡೌನ್‌ಲೋಡ್‌ ಮಾಡಬಹುದು

20 ಕೋಟಿ ವರ್ಷ ಹಳೆಯ ಡೈನೊಸಾರ್‌ ತಲೆಬುರುಡೆ ಪುನರ್‌ನಿರ್ಮಾಣ

ಪಿಟಿಐ
Published 14 ಜನವರಿ 2018, 20:17 IST
Last Updated 14 ಜನವರಿ 2018, 20:17 IST
ಮನೆಯಲ್ಲೇ ಕುಳಿತು ಡೌನ್‌ಲೋಡ್‌ ಮಾಡಬಹುದು
ಮನೆಯಲ್ಲೇ ಕುಳಿತು ಡೌನ್‌ಲೋಡ್‌ ಮಾಡಬಹುದು   

ಜೊಹಾನ್ಸ್‌ಬರ್ಗ್‌: 20 ಕೋಟಿ ವರ್ಷಗಳಷ್ಟು ಹಳೆಯದಾದ, ದಕ್ಷಿಣ ಆಫ್ರಿಕಾದ ಡೈನೊಸಾರ್‌ನ ತಲೆಬುರುಡೆಗೆ ಡಿಜಿಟಲ್‌ ರೂಪ ನೀಡುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಮ್ಯಾಸ್ಸೋಸ್ಪಾಂಡಿಲಸ್‌ ಎಂಬ ಈ ಡೈನೊಸಾರ್‌ನ ಪಳೆಯುಳಿಕೆಯ 3ಡಿ ಮುದ್ರಣವನ್ನು ಪ್ರಪಂಚದಾದ್ಯಂತ ಆಸಕ್ತರು ಮನೆಯಲ್ಲಿ ಕುಳಿತೇ ಪಡೆಯಬಹುದಾಗಿದೆ.

ದಕ್ಷಿಣ ಆಫ್ರಿಕಾದ ವಿಟ್‌ವಾಟರ್‌ಸ್ರ್ಯಾಂಡ್‌ನ ಸಂಶೋಧಕರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದ, ‘ಮ್ಯಾಸ್ಸೋಸ್ಪಾಂಡಿಲಸ್‌ನ ಜೊತೆಗೆ ಇತರ ಡೈನೊಸಾರ್‌ಗಳ ಮೇಲಿನ ಸಂಶೋಧನೆಗೂ ಸಹಾಯವಾಗಲಿದೆ’ ಎಂದು ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಮ್ಯಾಸ್ಸೋಸ್ಪಾಂಡಿಲಸ್‌ನ ತಲೆಬುರುಡೆಯ ಒಳಭಾಗದ ಮಾಹಿತಿ ಕಲೆಹಾಕಲು ಸಂಶೋಧಕರು ಸಿ.ಟಿ. ಸ್ಕ್ಯಾನ್‌ ಯಂತ್ರವನ್ನು ಬಳಸಿರುವುದು ವಿಶೇಷ. ಇದರಿಂದ ‘ಕಪಾಲ’ದಲ್ಲಿರುವ ಪ್ರತಿ ಮೂಳೆಯನ್ನೂ ಚಿತ್ರದಲ್ಲಿ ಮರುಜೋಡಿಸಲು ಸಾಧ್ಯವಾಗಿದೆ. ಅಲ್ಲದೆ, ‘ಮೆದುಳಿನಿಂದ ಹೊರಹೋಗಿರುವ ಹಾಗೂ ಕಿವಿಯ ಒಳಭಾಗದಲ್ಲಿ ಸಮತೋಲನ ಸಾಧಿಸುವ ನರಗಳ ಬಗ್ಗೆ ತಿಳಿಯಲು ಸಹ ಸಾಧ್ಯವಾಯಿತು’ ಎಂದು ವಿಶ್ವವಿದ್ಯಾಲಯದ ಸಂಶೋಧಕ ಕಿಮಿ ಚಾಪೆಲ್‌ ತಿಳಿಸಿದ್ದಾರೆ.

ADVERTISEMENT

‘ಪೀರ್‌ಜೆ’ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ. ಮ್ಯಾಸ್ಸೋಸ್ಪಾಂಡಿಲಸ್‌ ದಕ್ಷಿಣ ಆಫ್ರಿಕಾದ ಅತ್ಯಂತ ಪ್ರಸಿದ್ಧ ಡೈನೊಸಾರ್‌ಗಳಲ್ಲಿ ಒಂದಾಗಿದೆ. ಗೋಲ್ಡನ್‌ ಗೇಟ್‌ ರಾಷ್ಟ್ರೀಯ ಉದ್ಯಾನ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಇವುಗಳ ಪಳೆಯುಳಿಕೆಗಳು ಪತ್ತೆಯಾಗಿದ್ದವು. 1976ರಲ್ಲಿ ಜೇಮ್ಸ್‌ ಕಿಚಿಂಗ್ ಅವರು ಈ ಬೃಹತ್‌ ಪ್ರಾಣಿಗಳ ಮೊಟ್ಟೆ ಹಾಗೂ ಭ್ರೂಣಗಳನ್ನು ಪತ್ತೆಹಚ್ಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.