ADVERTISEMENT

ಅಮೆರಿಕ: ಮಕ್ಕಳನ್ನು ಹಿಂಸಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ

ಏಜೆನ್ಸೀಸ್
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
ಅಮೆರಿಕ: ಮಕ್ಕಳನ್ನು ಹಿಂಸಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ
ಅಮೆರಿಕ: ಮಕ್ಕಳನ್ನು ಹಿಂಸಿಸುತ್ತಿದ್ದ ದಂಪತಿ ವಿರುದ್ಧ ಪ್ರಕರಣ   

ರಿವರ್‌ಸೈಡ್‌: ತಮ್ಮ 13 ಮಕ್ಕಳನ್ನು ಮನೆಯಲ್ಲೇ ಕಟ್ಟಿಹಾಕಿ, ಹಿಂಸಿಸುತ್ತಿದ್ದ ಕ್ಯಾಲಿಫೋರ್ನಿಯಾದ ದಂಪತಿ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.

ಡೇವಿಡ್ ಅಲೆನ್ ಟರ್ಪಿನ್ (57) ಮತ್ತು ಲೂಯಿಸ್ ಆ್ಯನಾ ಟರ್ಪಿನ್ (49) ದಂಪತಿ ವಿರುದ್ಧ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ತಮ್ಮ ಮಕ್ಕಳನ್ನು ಹಿಂಸಿಸಿರುವುದಕ್ಕೆ 12, ಅಕ್ರಮ ಬಂಧನಕ್ಕೆ 12, ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಆರು ಮತ್ತು ಅವಲಂಬಿತ ವಯಸ್ಕ ಮಗನನ್ನು ಹಿಂಸಿಸಿದ್ದಕ್ಕೆ ಆರು ಆರೋಪಗಳನ್ನು ಹೊರಿಸಲಾಗಿದೆ.

ಡೇವಿಡ್‌ ಟರ್ಪಿನ್‌ ಮೇಲೆ ಮಕ್ಕಳನ್ನು ಬೆದರಿಸಿ ಅಥವಾ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನೂ ಹೊರಿಸಲಾಗಿದೆ ಎಂದು ಜಿಲ್ಲಾ ಅಟಾರ್ನಿ ಮೈಕ್ ಹೆಸ್ಟ್ರಿನ್ ತಿಳಿಸಿದ್ದಾರೆ. ದಂಪತಿಗೆ ಜಾಮೀನು ಪಡೆಯಲು ತಲಾ ₹83 ಕೋಟಿ ನಿಗದಿಪಡಿಸಲಾಗಿದೆ. ಎಲ್ಲ ಆರೋಪಗಳೂ ಸಾಬೀತಾದರೆ ದಂಪತಿ 94 ವರ್ಷಗಳವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ.

ADVERTISEMENT

‘ಲಾಸ್ ಏಂಜಲೀಸ್‌ನ ಆಗ್ನೇಯ ಭಾಗದ ಪೆರ್ರಿಸ್‌ ಪಟ್ಟಣದಲ್ಲಿರುವ ಈ ದಂಪತಿಯ ಮನೆಗೆ ಕಳೆದ ವಾರ ನ್ಯಾಯಾಂಗ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಸರಪಳಿಯಿಂದ ಬಂಧಿಸಿರುವ ಮಕ್ಕಳನ್ನು ನೋಡಿದ್ದರು. ಅಲ್ಲದೆ, ಮನೆಯ ಅವ್ಯವಸ್ಥೆ, ಕೆಟ್ಟ ವಾಸನೆ ಮುಂತಾದವುಗಳನ್ನು ಗಮನಿಸಿದ್ದರು. 13 ಮಕ್ಕಳಲ್ಲಿ ಏಳು ಮಂದಿ 18ರಿಂದ 29 ವಯಸ್ಸಿನವರಾಗಿದ್ದಾರೆ. ನೋಡಿದ ತಕ್ಷಣ ಅವರೂ ಚಿಕ್ಕ ಮಕ್ಕಳು ಎನಿಸುವಂತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.