ADVERTISEMENT

ರಾಯಭಾರ ಕಚೇರಿಯ ದಾಖಲೆಗಳೊಂದಿಗೆ ಗುಮಾಸ್ತ ನಾಪತ್ತೆ

ಪಿಟಿಐ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST

ಇಸ್ಲಾಮಾಬಾದ್‌: ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಪಾಕಿಸ್ತಾನದ ಸೇನಾ ಅಧಿಕಾರಿಯೊಬ್ಬರು, ಕೆಲವು ಸೂಕ್ಷ್ಮ ದಾಖಲೆಗಳೊಂದಿಗೆ ಪರಾರಿಯಾಗಿದ್ದಾರೆ.

‘ಈ ಅಧಿಕಾರಿಯನ್ನು ಐದು ತಿಂಗಳ ಹಿಂದೆ ನೇಮಕ ಮಾಡಲಾಗಿತ್ತು. ಈ ನಾಪತ್ತೆಯ ಹಿಂದೆ ವೈರಿ ದೇಶಗಳ ಕೈವಾಡ ಇರುವ ಶಂಕೆ ಇದ್ದು, ಆ ದೇಶಗಳ ಕೈಗೊಂಬೆಯಾಗಿ ಈ ಅಧಿಕಾರಿ ವರ್ತಿಸಿರುವ ಸಾಧ್ಯತೆ ಇದೆ’ ಎಂದು ಸೇನಾ ಸಚಿವಾಲಯ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಇಲ್ಲಿಯ ತಾರ್ನೋಲ್‌ ‍ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಅಧಿಕಾರಿಯನ್ನು ಪಾಕಿಸ್ತಾನದ ಸೇನೆಯಲ್ಲಿ ಸಿಪಾಯಿಯೆಂದು  ನೇಮಕ ಮಾಡಲಾಗಿತ್ತು. ನಂತರ ಅವರನ್ನು ವಿಯೆನ್ನಾದ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಗುಮಾಸ್ತ ಎಂದು ನೇಮಕ ಮಾಡಲಾಗಿತ್ತು. ಅವರಿಗೆ ರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಉಸ್ತುವಾರಿ ನೀಡಲಾಗಿತ್ತು. ಅದು ದೇಶದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಮಹತ್ವದ ಹುದ್ದೆ. ಈ ಅಧಿಕಾರಿಯು ಇದೇ 2ರಿಂದ ಗೈರುಹಾಜರು ಆಗಿದ್ದರು ಎಂದು ಸೇನಾ ಸಚಿವಾಲಯ ಹೇಳಿದೆ.

ADVERTISEMENT

ಆರೋಪವನ್ನು ಅಧಿಕಾರಿಯ ಹೆಂಡತಿ ತಳ್ಳಿಹಾಕಿದ್ದಾರೆ. ‘ನನ್ನ ಗಂಡ ಪಾಕಿಸ್ತಾನ ರಾಯಭಾರಿ ಕಚೇರಿಯಿಂದ ಯಾವುದೇ ದಾಖಲೆ ತೆಗೆದುಕೊಂಡು ಹೋಗಿಲ್ಲ. ಅವರು ಐದು ವರ್ಷಗಳ ನಂತರ ವಾಪಸ್ ಬರಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.