ADVERTISEMENT

‘ವೀಸಾ ಲಾಟರಿ’ ಪದ್ಧತಿ ರದ್ದು?

ಪಿಟಿಐ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
‘ವೀಸಾ ಲಾಟರಿ’ ಪದ್ಧತಿ ರದ್ದು?
‘ವೀಸಾ ಲಾಟರಿ’ ಪದ್ಧತಿ ರದ್ದು?   

ವಾಷಿಂಗ್ಟನ್: ನುರಿತ ತಂತ್ರಜ್ಞರ ಕೊರತೆ ತುಂಬುವ ಉದ್ದೇಶದಿಂದ ‘ವೀಸಾ ಲಾಟರಿ’ ಪದ್ಧತಿಯನ್ನು ಕೈಬಿಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಾಗಿದ್ದಾರೆ.

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಕಲ್ಪಿಸುವ ‘ಗ್ರೀನ್‌ ಕಾರ್ಡ್’ ಪಡೆಯಲು ಕಾಯುತ್ತಿರುವ ಸಾವಿರಾರು ಭಾರತೀಯ ತಂತ್ರಜ್ಞರಿಗೆ ಇದರಿಂದ ನೆರವಾಗುವ ಸಾಧ್ಯತೆ ಇದೆ. ಒಂದು ವೇಳೆ ಈ ಪ್ರಸ್ತಾವ ಅನುಮೋದನೆಗೊಂಡು ಕಾಯ್ದೆಯಾಗಿ ಜಾರಿಯಾದಲ್ಲಿ, ಗ್ರೀನ್‌ಕಾರ್ಡ್‌ಗೆ ಕಾಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಈಚೆಗಿನ ವರ್ಷಗಳಲ್ಲಿ, ನ್ಯೂಯಾರ್ಕ್‌ನಲ್ಲಿ ಭಯೋತ್ಪಾದನಾ ದಾಳಿಯಂತಹ ಕೃತ್ಯಗಳಲ್ಲಿ ಭಾಗಿಯಾದ ಉಗ್ರರು ಗ್ರೀನ್‌ ಕಾರ್ಡ್‌ ಅಥವಾ ಸರಣಿ ವಲಸೆ ಮೂಲಕ ಅಮೆರಿಕಕ್ಕೆ ಬಂದು ನೆಲೆಸಿದ್ದವರೇ ಆಗಿದ್ದಾರೆ.

ADVERTISEMENT

ಕೋಟಾಗಾಗಿ ಕಾಯಬೇಕಿಲ್ಲ!: ಪ್ರತಿ ವರ್ಷ  50 ಸಾವಿರ  ವಲಸಿಗರಿಗೆ ಅಮೆರಿಕ ಗ್ರೀನ್ ಕಾರ್ಡ್ ನೀಡುತ್ತದೆ. ಯಾವುದೇ ದೇಶದ ಶೇ7ರಷ್ಟು ವಲಸಿಗರು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ. ಈ ಕೋಟಾ ಮಿತಿಯಿಂದಾಗಿ ಸಾವಿರಾರು ಭಾರತೀಯರು ತಮ್ಮ ಸರದಿಗಾಗಿ ಕಾಯುವಂತಾಗಿದೆ.

ಮಸೂದೆ ಮಂಡನೆ: ವಾರ್ಷಿಕ ಎಚ್‌1ಬಿ ವೀಸಾಗಳ ಸಂಖ್ಯೆ ಹೆಚ್ಚಳ ಪ್ರಸ್ತಾಪವಿರುವ ಮಸೂದೆಯನ್ನು  ರಿಪಬ್ಲಿಕನ್ ಪಕ್ಷದ ಇಬ್ಬರು ಸಂಸದರು ಅಮೆರಿಕ ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಿದರು. ಜಗತ್ತಿನ ಅತ್ಯುತ್ತಮ ಹಾಗೂ ನುರಿತ ತಂತ್ರಜ್ಞರು ಅಮೆರಿಕಕ್ಕೆ ಬರುವಂತೆ ಮಾಡುವುದು ಇದರ ಉದ್ದೇಶ.

ಸಂಸದರಾದ ಒರಿನ್ ಹ್ಯಾಚ್ ಹಾಗೂ ಜೆಫ್ ಫ್ಲೇಕ್ ಅವರು ಈ ಮಸೂದೆ ಮಂಡಿಸಿದ್ದಾರೆ.  ಎಚ್‌1ಬಿ ವೀಸಾ ಹೊಂದಿರುವ ವ್ಯಕ್ತಿಯ ಪತಿ/ಪತ್ನಿ ಅಥವಾ ಅವಲಂಬಿತ ಮಕ್ಕಳಿಗೆ ಅಮೆರಿಕದಲ್ಲಿ ಉದ್ಯೋಗದ ಅವಕಾಶವನ್ನು ಈ ಮಸೂದೆ ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.