ಬ್ರಸೆಲ್ಸ್: ಪ್ಯಾರಿಸ್‌ನಲ್ಲಿ 2015ರಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಬದುಕಿರುವ ಏಕೈಕ ಶಂಕಿತ ದಾಳಿಕೋರ ಸಲಾಹ್ ಅಬ್ಡೆಸ್ಲಾಂ ವಿಚಾರಣೆ ವೇಳೆ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾನೆ.
2016ರ ಮಾರ್ಚ್‌ನಲ್ಲಿ ಪೊಲೀಸರು ಬಂಧಿಸಿದಾಗಿನಿಂದ ಈತ ತನಿಖಾಧಿಕಾರಿಗಳ ಜತೆ ಮಾತನಾಡಲು ನಿರಾಕರಿಸುತ್ತಿದ್ದಾನೆ.
ನ್ಯಾಯಮೂರ್ತಿ ಮೇರಿ ಫ್ರಾನ್ಸ್ ಕೆಟಜನ್ ಅವರು, ಅಬ್ಡೆಸ್ಲಾಂಗೆ ತನ್ನ ಗುರುತು ದೃಢೀಕರಿಸುವಂತೆ ಸೂಚಿಸಿದಾಗ ‘ಯಾವುದೇ ಪ್ರಶ್ನೆಗಳಿಗೆ ನಾನು ಉತ್ತರಿಸಲು ಬಯಸುವುದಿಲ್ಲ’ ಎಂದು ಹೇಳಿದ್ದಾನೆ.
ಎದ್ದುನಿಲ್ಲುವಂತೆ ನ್ಯಾಯಮೂರ್ತಿ ಸೂಚಿಸಿದ ತಕ್ಷಣ ವಿರೋಧ ವ್ಯಕ್ತಪಡಿಸಿದ ಈತ, ತಾನು ವಿಚಾರಣೆಗೆ ಸಹಕಾರ ನೀಡುವುದಿಲ್ಲ ಎಂದು ಸಂಜ್ಞೆ ಮಾಡಿದ್ದಾನೆ.
ಈತ, 2016ರ ಮಾರ್ಚ್ 15ರಂದು ಬ್ರಸೆಲ್ಸ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಬಳಸಿದ ಹಾಗೂ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಪ್ಯಾರಿಸ್ ದಾಳಿ ನಡೆದ ನಂತರ ನಾಲ್ಕು ತಿಂಗಳ ಬಳಿಕ ಈತ ಈ ಕೃತ್ಯ ಎಸಗಿದ್ದ. ಮೂರು ದಿನಗಳ ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.