ADVERTISEMENT

ಭಾರತದ ಮಧ್ಯಸ್ಥಿಕೆಗೆ ಪ್ಯಾಲೆಸ್ಟೀನ್ ಮನವಿ

ಇಸ್ರೇಲ್ ಜತೆ ಸಂಘರ್ಷ: ಎರಡು ದೇಶ ಪರಿಹಾರದನ್ವಯ ಶಾಂತಿ ಮಾತುಕತೆ

ಪಿಟಿಐ
Published 10 ಫೆಬ್ರುವರಿ 2018, 19:30 IST
Last Updated 10 ಫೆಬ್ರುವರಿ 2018, 19:30 IST
ಭಾರತದ ಮಧ್ಯಸ್ಥಿಕೆಗೆ ಪ್ಯಾಲೆಸ್ಟೀನ್ ಮನವಿ
ಭಾರತದ ಮಧ್ಯಸ್ಥಿಕೆಗೆ ಪ್ಯಾಲೆಸ್ಟೀನ್ ಮನವಿ   

ರಾಮಲ್ಲಾ (ವೆಸ್ಟ್‌ ಬ್ಯಾಂಕ್): ‘ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ಮಧ್ಯೆ ಶಾಂತಿ ಸ್ಥಾಪಿಸುವಲ್ಲಿ ಭಾರತ ಪಾತ್ರವಹಿಸಬೇಕು’ ಎಂದು ಪ್ಯಾಲೆಸ್ಟೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಮನವಿ ಮಾಡಿಕೊಂಡಿದ್ದಾರೆ.

ಪ್ಯಾಲೆಸ್ಟೀನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಮೋದಿ ಜತೆ ಶನಿವಾರ ಮಾತುಕತೆ ನಡೆಸಿದ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಬ್ಬಾಸ್ ಈ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ಬಗ್ಗೆ ತನ್ನ ನಿಲುವು ಏನು ಎಂಬುದನ್ನು ಭಾರತ ಇನ್ನೂ ಸ್ಪಷ್ಟಪಡಿಸಿಲ್ಲ.

‘ಸ್ವಾತಂತ್ರ್ಯಸಂಬಧ ಮಾತುಕತೆ ನಡೆಸಲು ನಾವು ಸದಾ ಸಿದ್ಧ. ಆದರೆ, ಪ್ಯಾಲೆಸ್ಟೀನ್ ಮತ್ತು ಇಸ್ರೇಲ್‌ ಪ್ರತ್ಯೇಕ ದೇಶ ಎಂದು ಹೇಳುವ ‘ಎರಡು ದೇಶ ಪರಿಹಾರ: 1967’ರ ಪ್ರಕಾರವೇ ಮಾತುಕತೆ ನಡೆಯಬೇಕು’ ಎಂದು ಅಬ್ಬಾಸ್ ಷರತ್ತು ವಿಧಿಸಿದ್ದಾರೆ.

ADVERTISEMENT

‘ಆರ್ಥಿಕ ಮತ್ತು ಅಧಿಕಾರದ ವಿಚಾರದಲ್ಲಿ ಭಾರತ ಜಾಗತಿಕ ವೇದಿಕೆಯಲ್ಲಿ ಶಕ್ತಿಯುತ ದೇಶವಾಗಿ ಹೊರಹೊಮ್ಮುತ್ತಿದೆ. ಭಾರತ ಅಲಿಪ್ತ ಚಳವಳಿ ಮುನ್ನಡೆಸಿದ್ದು ತಿಳಿದಿದೆ. ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಶಾಂತಿ ಮಾತುಕತೆಯಲ್ಲಿ ಭಾರತವು ಅಂತರರಾಷ್ಟ್ರೀಯ ಸಮುದಾಯದ ಪ್ರತಿನಿಧಿಯಾಗಿರಬೇಕು ಎಂದು ನಾವು ಬಯಸುತ್ತೇವೆ. ಇಲ್ಲಿ ಶಾಂತಿ ನೆಲೆಸಲು ನಾವು ಭಾರತವನ್ನು ಅವಲಂಭಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಪಯಣದಲ್ಲಿ ಜತೆಯಾಗಿರುತ್ತೇವೆ’: ‘ಭಾರತ ಮತ್ತು ಪ್ಯಾಲೆಸ್ಟೀನ್‌ನ ಸ್ನೇಹಸಂಬಂಧ ಹಲವು ಕಠಿಣ ಪರೀಕ್ಷೆಗಳನ್ನು ಜಯಿಸಿದೆ. ಹಲವು ಕಠಿಣ ಸವಾಲುಗಳನ್ನು ಎದುರಿಸುವಲ್ಲಿ ಇಲ್ಲಿಯ ಜನರು ಅಭೂತಪೂರ್ವ ಎದೆಗಾರಿಕೆ ತೋರಿಸಿದ್ದಾರೆ. ಪ್ಯಾಲೆಸ್ಟೀನ್‌ನ ಅಭಿವೃದ್ಧಿಯ ಪಯಣದಲ್ಲಿ ಭಾರತವು ಯಾವಾಗಲೂ ಜತೆಯಾಗಿರುತ್ತದೆ’ ಎಂದು ಮೋದಿ ಹೇಳಿದ್ದಾರೆ.

‘ಇಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕು ಎಂದು ಭಾರತ ಬಯಸುತ್ತದೆ. ಮಾತುಕತೆ ಮೂಲಕ ಶಾಶ್ವತ ಪರಿಹಾರ ಸಾಧ್ಯವಿದೆ. ರಾಜತಾಂತ್ರಿಕ ಕ್ರಮಗಳು ಮಾತ್ರವೇ ಹಿಂಸಾಚಾರ ಮತ್ತು ಇತಿಹಾಸದ ಕರಾಳ ಹೊರೆಗಳಿಂದ ಬಿಡುಗಡೆ ನೀಡುತ್ತವೆ. ಅದು ಅಷ್ಟು ಸುಲಭವಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಪ್ರಯತ್ನ ನಡೆಯುತ್ತಲೇ ಇರಬೇಕು’ ಎಂದರು.

ರೂಢಿ ಬದಲಿಸಿದ ಮೋದಿ: ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಗಣ್ಯರೆಲ್ಲರೂ ಪ್ಯಾಲೆಸ್ಟೀನ್‌ಗೆ ಭೇಟಿ ನೀಡುತ್ತಿದ್ದದ್ದು ರೂಢಿ. ಪ್ರಣವ್ ಮುಖರ್ಜಿ  ರಾಷ್ಟ್ರಪತಿಯಾಗಿದ್ದಾಗಲೂ ಅವರು ಇಸ್ರೇಲ್‌ಗೆ ಭೇಟಿ ನೀಡಿ, ಅಲ್ಲಿಂದ ಪ್ಯಾಲೆಸ್ಟೀನ್‌ಗೆ ತೆರಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಈ ರೂಢಿಯನ್ನು ಬದಿಗೊತ್ತಿದ್ದಾರೆ.

ಕಳೆದ ಜುಲೈನಲ್ಲಿ ಅವರು ಇಸ್ರೇಲ್‌ ಪ್ರವಾಸ ಕೈಗೊಂಡಿದ್ದಾಗ ಪ್ಯಾಲೆಸ್ಟೀನ್‌ಗೆ ತೆರಳದೆ ವಾಪಸ್ ಆಗಿದ್ದರು. ಈಗ ಪ್ಯಾಲೆಸ್ಟೀನ್‌ ಪ್ರವಾಸದಲ್ಲಿದ್ದು, ಇಸ್ರೇಲ್‌ಗೆ ಭೇಟಿ ನೀಡುವುದಿಲ್ಲ. ಇದು ಪ್ಯಾಲೆಸ್ಟೀನ್ ಮತ್ತು ಇಸ್ರೇಲ್‌ಗಳನ್ನು ಪ್ರತ್ಯೇಕ ದೇಶಗಳಾಗಿ ಪರಿಗಣಿಸುವ ಭಾರತದ ನಿಲುವಿನ ಧ್ಯೋತಕ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.