ADVERTISEMENT

ರೀಮಲ್‌ ಚಂಡಮಾರುತ: ಬಾಂಗ್ಲಾದೇಶದಲ್ಲಿ 7 ಮಂದಿ ಸಾವು

ಪಿಟಿಐ
Published 27 ಮೇ 2024, 7:40 IST
Last Updated 27 ಮೇ 2024, 7:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಢಾಕಾ: 'ರೀಮಲ್' ಚಂಡಮಾರುತ ಬಾಂಗ್ಲಾದೇಶದ ಕರಾವಳಿ ಭಾಗಕ್ಕೆ ಅಪ್ಪಳಿಸಿದೆ. ಈ ಭಾಗದಲ್ಲಿ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಭಾರಿ ಮಳೆಯಿಂದ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಘಟನೆಯಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ವಿದ್ಯುತ್‌ ಇಲ್ಲದೇ ಪರದಾಡುತ್ತಿದ್ದಾರೆ.

'80-90 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಭಾನುವಾರ ಮಧ್ಯರಾತ್ರಿಯ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಸೋಮವಾರ ‌ಮುಂಜಾನೆ 5.30ರ ಸುಮಾರಿಗೆ ಸಾಗರ್ ದ್ವೀಪದ ಈಶಾನ್ಯಕ್ಕೆ 150 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯು ಧಾರಾಕಾರ ಮಳೆಯನ್ನು ಸುರಿಸಿದೆ. ಮತ್ತಷ್ಟು ಈಶಾನ್ಯಕ್ಕೆ ಚಲಿಸಿ ಚಂಡಮಾರುತ ದುರ್ಬಲವಾಗಿದೆ' ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಚಂಡಮಾರುತ ಬಾರಿಸಾಲ್, ಭೋಲಾ, ಪಟುಖಾಲಿ, ಸತ್ಖಿರಾ ಮತ್ತು ಚಟ್ಟೋಗ್ರಾಮ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ.

ಪಟುವಾಖಾಲಿಯಲ್ಲಿ ಇಬ್ಬರು, ಬರಿಶಾಲ್, ಭೋಲಾ ಮತ್ತು ಚಟ್ಟೋಗ್ರಾಮದಲ್ಲಿ ಐವರು ಸೇರಿ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆ. ಮೊಂಗ್ಲಾದಲ್ಲಿ ಟ್ರಾಲರ್ ಮುಳುಗಿದ್ದು, ಮಗು ಸೇರಿದಂತೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಢಾಕಾದ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ವಿದ್ಯುತ್ ಇಲ್ಲದೆ ಜನರ ಪರದಾಟ:

ರೀಮಲ್‌ನಿಂದ ಉಂಟಾಗಬಹುದಾದ ಸಂಭವನೀಯ ಹಾನಿಯನ್ನು ತಪ್ಪಿಸಲು ಗ್ರಾಮೀಣ ವಿದ್ಯುತ್ ಪ್ರಾಧಿಕಾರವು ಕರಾವಳಿ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಿದೆ. ಕೆಲವು ಪ್ರದೇಶಗಳಲ್ಲಿ 12 ಗಂಟೆಗಳಿಗೂ ಹೆಚ್ಚು ಕಾಲ ವಿದ್ಯುತ್ ಕಡಿತಗೊಳಿಸಲಾಗಿದೆ. ಇದರಿಂದ ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.

'ಚಂಡಮಾರುತ ಉತ್ತರದ ಕಡೆಗೆ ಚಲಿಸಿ, ಕರಾವಳಿಯನ್ನು ದಾಟಿದೆ. ಸದ್ಯ ಖುಲ್ನಾದ ಕೊಯಿರಾ ಬಳಿ ನೆಲೆಗೊಂಡಿದೆ. ನಂತರ ಉತ್ತರದ ಕಡೆಗೆ ತನ್ನ ಪಥವನ್ನು ಚಲಿಸುವ ನಿರೀಕ್ಷೆಯಿದೆ. ಮುಂದಿನ 2-3 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ' ಎಂದು ಬಾಂಗ್ಲಾದೇಶದ ಹವಾಮಾನ ಇಲಾಖೆ ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೂವರಿಗೆ ಗಾಯ, ಸಂಚಾರ ಅಸ್ತವ್ಯಸ್ತ:

ಇತ್ತ ಕೋಲ್ಕತ್ತದ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಮರಗಳು ನೆಲಕ್ಕುರುಳಿ ಮೂವರು ಗಾಯಗೊಂಡಿದ್ದಾರೆ. ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದರ್ನ್ ಅವೆನ್ಯೂ, ಲೇಕ್ ಪ್ಲೇಸ್, ಚೆಟ್ಲಾ, ಡಿಎಲ್ ಖಾನ್ ರಸ್ತೆ, ಡಫರಿನ್ ರಸ್ತೆ, ಬ್ಯಾಲಿಗುಂಜ್ ರಸ್ತೆ, ನ್ಯೂ ಅಲಿಪೋರ್, ಬೆಹಾಲಾ, ಜಾದವ್‌ಪುರ್, ಗೋಲ್‌ಪಾರ್ಕ್, ಹತಿಬಗಾನ್ ನಗರದ ವಿವಿಧೆಡೆ ಮರಗಳು ಧರೆಗುರುಳಿವೆ.

ಸದರ್ನ್ ಅವೆನ್ಯೂ, ಲೇಕ್ ವ್ಯೂ ರಸ್ತೆ, ಟಾಲಿಗಂಜ್, ಅಲಿಪುರ ಮತ್ತು ಸೆಂಟ್ರಲ್ ಅವೆನ್ಯೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೀರು ನಿಂತಿದೆ. ಇದರಿಂದಾಗಿ ಸಂಚಾರ ವ್ಯತ್ಯಯವಾಗಿದೆ ಎಂದು ಕೋಲ್ಕತ್ತ ಟ್ರಾಫಿಕ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಪೂರ್ವ ರೈಲ್ವೆಯ ಸೀಲ್ಡಾ ದಕ್ಷಿಣ ವಿಭಾಗದಲ್ಲಿ ಬೆಳಿಗ್ಗೆ ಮೂರು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ರೈಲು ಸೇವೆ ಬೆಳಿಗ್ಗೆ 9 ಗಂಟೆಗೆ ಪುನರಾರಂಭಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ವಿಮಾನ ಸೇವೆ ಪುನರಾರಂಭ

ಚಂಡಮಾರುತ ಹಿನ್ನೆಲೆಯಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 21 ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ವಿಮಾನ ಸೇವೆ ಸೋಮವಾರ ಬೆಳಿಗ್ಗೆ ಪುನರಾರಂಭಗೊಂಡಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.