ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಹೋಟೆಲ್ ಒಂದರ ಮೇಲೆ ಭಾನುವಾರ ನಡೆದ ಉಗ್ರರ ದಾಳಿಯಲ್ಲಿ ಚೀನಾ, ರಷ್ಯಾ, ಉಕ್ರೇನ್ ದೇಶಗಳ 9 ವಿದೇಶಿ ಪ್ರವಾಸಿಗರು ಹಾಗೂ ಪಾಕ್‌ನ ಮಾರ್ಗದರ್ಶಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಉತ್ತರ ಪಾಕಿಸ್ತಾನದಲ್ಲಿರುವ ವಿಶ್ವದ 9 ನೇ ಅತಿ ಎತ್ತರದ ನಂಗಾ ಪರ್ವತದ ಪರ್ವತಾರೋಹಿಗಳು ಉಳಿದುಕೊಂಡಿದ್ದ ಗಿಲ್ಗಿಟ್- ಬಲ್ಟಿಸ್ತಾನ್ ಪ್ರದೇಶದ ಫೈರಿ ಮೆಡೋವ್ಸ್ ಹೋಟೆಲ್ ಮೇಲೆ ಶಸ್ತ್ರಸಜ್ಜಿತ ಉಗ್ರರು ದಾಳಿ ಮಾಡಿದ್ದಾರೆ.
ಘಟನೆಯಲ್ಲಿ ಮೂವರು ಚೀನೀಯರು, ಒಬ್ಬ ರಷ್ಯನ್, ಐದು ಮಂದಿ ಉಕ್ರೇನ್‌ನ ಪ್ರಜೆ ಹಾಗೂ ಒಬ್ಬ ಪಾಕಿಸ್ತಾನದ ಮಾರ್ಗದರ್ಶಿ ಮೃತಪಟ್ಟಿದ್ದಾನೆ ಎಂದು ಒಳಾಡಳಿತ ಸಚಿವ ನಾಸಿರ್ ಅಲಿ ಖಾನ್ ತಿಳಿಸಿದ್ದಾರೆ.
ಆತ್ಮಾಹುತಿ ಬಾಂಬ್: ಇರಾಕ್‌ನಲ್ಲಿ 15ಸಾವು
ಬಾಗ್ದಾದ್ (ಐಎಎನ್‌ಎಸ್/ಎಎಫ್‌ಪಿ): ಶಿಯಾ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಕನಿಷ್ಠ 15 ಭಕ್ತರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಆತ್ಮಾಹುತಿ ಬಾಂಬರ್ ಶನಿವಾರ ಸಂಜೆ ತಾಜ್ ಪ್ರದೇಶದಲ್ಲಿ ತನ್ನನ್ನು ಸ್ಫೋಟಿಸಿಕೊಂಡಿರುವ ಘಟನೆ ನಡೆದಿದೆ ಎಂದು ಕ್ಷಿನ್‌ಹುವಾ ವರದಿ ಮಾಡಿದೆ.
ತಕ್ಷಣ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಅಲ್-ಖೈದಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಸುನ್ನಿ ಉಗ್ರರು ಪದೇ ಪದೇ ಇರಾಕಿನ ಶಿಯಾ ಪಂಗಡದವರ ಮೇಲೆ ದಾಳಿ ನಡೆಸುತ್ತಲೇ ಇರುತ್ತಾರೆ.
7 ಲಕ್ಷ ಗಿಡ: ಪಾಕ್ ವಿಶ್ವ ದಾಖಲೆ
ಇಸ್ಲಾಮಾಬಾದ್ (ಪಿಟಿಐ): ಒಂದೇ ದಿನದಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪಾಕಿಸ್ತಾನ ವಿಶ್ವ ದಾಖಲೆ ನಿರ್ಮಿಸಿದೆ.
ಕರೋಚನ್ ಕಡಲು ತೀರದಲ್ಲಿ ಒಂದೇ ದಿನ ಏಳು ಲಕ್ಷ ಲಕ್ಷ ಗಿಡಗಳನ್ನು ನೆಡುವ ಮೂಲಕ ಪಾಕಿಸ್ತಾನ ಶನಿವಾರ ಈ ವಿಶ್ವ ದಾಖಲೆ ಮಾಡಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಬಂದರು ನಗರ ಕರಾಚಿಯಿಂದ 230 ಕಿ.ಮೀ ದೂರದಲ್ಲಿರುವ ಇಂಡಸ್ ಡೆಲ್ಟಾದ ಕರೋಚನ್ ಕಡಲು ತೀರದಲ್ಲಿ 300 ಸ್ವಯಂ ಸೇವಕರು ವಿಶ್ವ ದಾಖಲೆ ಮುರಿಯುವಲ್ಲಿ ನಿರತರಾಗಿದ್ದಾರೆ.
ಭಾರತ ಇತ್ತೀಚೆಗೆ 6, 11, 137 ಸಸಿಗಳನ್ನು ಒಂದು ವರ್ಷಕ್ಕೆ ನೆಡುವ ಮೂಲಕ ವಿಶ್ವ ದಾಖಲೆ ಮಾಡಿತ್ತು.
ಗಗನನೌಕೆಗೆ ಜೋಡಣೆ ಯಶಸ್ವಿ
ಬೀಜಿಂಗ್ (ಪಿಟಿಐ): ಕಕ್ಷೆಯಲ್ಲಿ ತಿರುಗುತ್ತಿರುವ ಬಾಹ್ಯಾಕಾಶ ಪ್ರಯೋಗಾಲಯಕ್ಕೆ ತಮ್ಮ ಗಗನನೌಕೆಯನ್ನು ಕೈಯಿಂದಲೇ ಜೋಡಿಸುವಲ್ಲಿ ಚೀನಾದ ಮೂವರು ಗಗನಯಾತ್ರಿಗಳು ಸಫಲರಾಗಿದ್ದಾರೆ.
`ತಿಯಾನ್‌ಗಾಂಗ್-1' ಎಂಬ ಬಾಹ್ಯಾಕಾಶ ಪ್ರಯೋಗಾಲಯಕ್ಕೆ `ಶೆನ್‌ಝೌ-10' ಎಂಬ ಗಗನನೌಕೆಯನ್ನು ಜೋಡಿಸಿದ ಈ ಗಗನಯಾತ್ರಿಗಳ ಪೈಕಿ ಒಬ್ಬ ಮಹಿಳೆ ಕೂಡ ಸೇರಿದ್ದಾರೆ ಎಂದು ಬೀಜಿಂಗ್ ಏರೋಸ್ಪೇಸ್ ಕಂಟರೋಲ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.
ನೀ ಹೈಶೆಂಗ್ ಚಾಲನೆ ಮಾಡುತ್ತಿರುವ ಗಗನನೌಕೆಯಲ್ಲಿ ಝಾಂಗ್ ಕ್ಸಿಯಾಗಾಂಗ್ ಹಾಗೂ ಮಹಿಳಾ ಗಗನಯಾತ್ರಿ ವಾಂಗ್ ಯಾಪಿಂಗ್ ಇದ್ದಾರೆ. ಸ್ವಯಂಚಾಲಿತ ಜೋಡಣಾ ಪ್ರಕ್ರಿಯೆಯನ್ನು ಇವರು ಜೂನ್ 13ರಂದೇ ಪೂರ್ಣಗೊಳಿಸಿದ್ದಾರೆ.ವೇಳಾಪಟ್ಟಿ ಪ್ರಕಾರ, ಗಗನಯಾತ್ರಿಗಳು ಬಾಹ್ಯಾಕಾಶ ಘಟಕಕ್ಕೆ ಮತ್ತೆ ಪ್ರವೇಶಿಸಿ ವೈಜ್ಞಾನಿಕ ಪ್ರಯೋಗ ಕೈಗೊಳ್ಳಲಿದ್ದಾರೆ.
ಆಗಸದಲ್ಲಿ `ಸೂಪರ್ ಮೂನ್'
ಲಾಸ್ ಏಂಜಲೀಸ್ (ಎಪಿ): ಈ ವರ್ಷದ ಅತ್ಯಂತ ಪ್ರಕಾಶಮಾನ ಹಾಗೂ ದೊಡ್ಡದಾದ ಪೂರ್ಣಚಂದ್ರ ಭೂಮಿಗೆ ಹತ್ತಿರವಾಗಿ ಆಗಸದಲ್ಲಿ ಭಾನುವಾರ ಗೋಚರಿಸಿತು.
ಸಾಮಾನ್ಯ ದಿನಗಳಿಗಿಂತ ಈ ದಿನ ಚಂದ್ರ ಶೇ 14 ರಷ್ಟು ದೊಡ್ಡದಾಗಿ ಗೋಚರಿಸಿತು. ಬರಿಗಣ್ಣಿನಿಂದ ಈ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂದು ಖಗೋಳತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.