ADVERTISEMENT

ಅಫ್ಗಾನಿಸ್ತಾನದಿಂದ ಗುಂಡಿನ ದಾಳಿ: ಪಾಕಿಸ್ತಾನದ 6 ಮಂದಿ ನಾಗರಿಕರ ಸಾವು

ಪಿಟಿಐ
Published 12 ಡಿಸೆಂಬರ್ 2022, 4:19 IST
Last Updated 12 ಡಿಸೆಂಬರ್ 2022, 4:19 IST
   

ಚಮಾನ್(ಪಾಕಿಸ್ತಾನ): ಅಫ್ಗಾನಿಸ್ತಾನದ ಪಡೆಗಳು ಭಾನುವಾರ ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದು, 6 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಮಿಲಿಟರಿ ಹೇಳಿದೆ.

ಗುಂಡಿನ ದಾಳಿಯಲ್ಲಿ 12ಕ್ಕೂ ಅಧಿಕ ನಾಗರಿಕರು ಗಾಯಗೊಂಡಿದ್ದಾರೆ. ಯಾವುದೇ ಪ್ರಚೋದನೆ ಇಲ್ಲದೆಯೂ ಬಲೂಚಿಸ್ತಾನದ ಚಮಾನ್ ಪಟ್ಟಣದ ಬಳಿ ಈ ದಾಳಿ ನಡೆದಿದೆ.

‘ಅಫ್ಗನ್ ಪಡೆಯ ಅಪ್ರಚೋದಿತ ಆಕ್ರಮಣಕಾರಿ ದಾಳಿಗೆ ತಕ್ಕ ಪ್ರತಿಕ್ರಿಯೆಯನ್ನು ಪಾಕಿಸ್ತಾನದಿಂದ ನೀಡಲಾಗಿದೆ. ಆದರೆ, ನಾಗರಿಕರನ್ನು ಗುರಿಯಾಗಿಸಿಲ್ಲ’ಎಂದು ಪಾಕ್ ಮಿಲಿಟರಿ ತಿಳಿಸಿದೆ.

ADVERTISEMENT

‘ಕಾಬೂಲ್ ಅಧಿಕಾರಿಗಳನ್ನೂ ಸಂಪರ್ಕಿಸಿರುವ ಪಾಕಿಸ್ತಾನದ ಮಿಲಿಟರಿ, ಪರಿಸ್ಥಿತಿಯ ಗಂಭೀರತೆ ಬಗ್ಗೆ ವಿವರಿಸಿದ್ದು, ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳಲು ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದೆ’ಎಂದು ಅದು ತಿಳಿಸಿದೆ.

ಅಫ್ಗಾನ್ ಪಡೆಗಳು ಪಾಕಿಸ್ತಾನ ಗಡಿಯ ತಂತಿ ಬೇಲಿ ಕತ್ತರಿಸಲು ಮುಂದಾದಾಗ ಸಂಘರ್ಷ ಭುಗಿಲೆದ್ದಿದೆ ಎಂದು ಪಾಕ್ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸಂಘರ್ಷದಲ್ಲಿ ಒಬ್ಬ ತಾಲಿಬಾನ್ ಸೈನಿಕ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ಸ್ಪಿನ್ ಬೋಲ್ಡಾಕ್ ಮತ್ತು ಪಾಕಿಸ್ತಾನದ ಚಮಾನ್ ನಡುವೆ ನಿತ್ಯ ವ್ಯಾಪಾರ ವಹಿವಾಟು, ವೈದ್ಯಕೀಯ ಸೇವೆಗಾಗಿ ಸಾವಿರಾರು ಮಂದಿ ಸಂಚರಿಸುತ್ತಾರೆ.

'ಶೆಲ್ ದಾಳಿಯಿಂದ ಭಾರಿಪ್ರಮಾಣದ ಬೆಂಕಿ ಆವರಿಸಿತು. ಆ ಸಂದರ್ಭ ನನಗೆ ಪ್ರಜ್ಞೆ ತಪ್ಪಿತು. ಬಳಿಕ ಏನಾಯಿತು ಎಂಬುದು ತಿಳಿದಿಲ್ಲ’ ಎಂದು ಗಾಯಗೊಂಡಿರುವ ಪಾಕ್ ನಾಗರಿಕ ಫಿದಾ ಮುಹಮ್ಮುದ್ ತಿಳಿಸಿದ್ದಾರೆ.

ಕಳೆದ ತಿಂಗಳು, ಚಮಾನ್ ಗಡಿ ಬಳಿ ಬಂದೂಕುಧಾರಿಯೊಬ್ಬ ಪಾಕಿಸ್ತಾನದ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದರಿಂದ ಅದನ್ನು ಒಂದು ವಾರ ಮುಚ್ಚಲಾಗಿತ್ತು.

ಕಳೆದ ವರ್ಷ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ, ಎರಡೂ ದೇಶಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚಿದೆ. ಭಯೋತ್ಪಾದಕ ಗುಂಪುಗಳು ಅಫ್ಗಾನ್ ನೆಲದಿಂದ ದಾಳಿಗಳನ್ನು ಯೋಜಿಸುತ್ತಿವೆ ಎಂದು ಪಾಕಿಸ್ತಾನ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.