ADVERTISEMENT

ಅಫ್ಗನ್: ಸ್ತ್ರೀ ಸ್ವಾತಂತ್ರ್ಯಕ್ಕೆ ತಾಲಿಬಾನ್‌ ಮುಸುಕು

ಏಜೆನ್ಸೀಸ್
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST
ಕಾಬೂಲ್‌ನಲ್ಲಿ ತಾಲಿಬಾನ್ ಸೈನಿಕರ ಗಸ್ತು ತೀವ್ರಗೊಂಡಿದೆ. ನಗರದ ಬ್ಯೂಟಿ ಪಾರ್ಲರ್ ಹೊರಗಿದ್ದ ಮಹಿಳೆಯರ ಚಿತ್ರಗಳಿಗೆ ಮಸಿ ಬಳಿಯಲಾಗಿದೆ.
ಕಾಬೂಲ್‌ನಲ್ಲಿ ತಾಲಿಬಾನ್ ಸೈನಿಕರ ಗಸ್ತು ತೀವ್ರಗೊಂಡಿದೆ. ನಗರದ ಬ್ಯೂಟಿ ಪಾರ್ಲರ್ ಹೊರಗಿದ್ದ ಮಹಿಳೆಯರ ಚಿತ್ರಗಳಿಗೆ ಮಸಿ ಬಳಿಯಲಾಗಿದೆ.   

ಕಾಬೂಲ್‌: ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನ್‌ನ 2.0 ಆಳ್ವಿಕೆಯು ಸೌಮ್ಯ ಸ್ವರೂಪದ್ದಾಗಿರಲಿದೆ ಎಂದು ಆ ಸಂಘಟನೆಯ ನಾಯಕರು ಮತ್ತೆ ಮತ್ತೆ ಭರವಸೆ ಕೊಡುತ್ತಿದ್ದಾರೆ. ಆದರೆ, ವಾಸ್ತವವು ಅದಕ್ಕೆ ವ್ಯತಿರಿಕ್ತವಾಗಿದೆ. ಕಾಬೂಲ್‌ನ ಬೀದಿಬದಿಗಳಲ್ಲಿ ಇರುವ ಮಹಿಳೆಯರ ಚಿತ್ರಗಳನ್ನು ಧ್ವಂಸ ಮಾಡಲಾಗಿದೆ, ಅವುಗಳಿಗೆ ಹೊದಿಕೆ ಮುಚ್ಚಲಾಗಿದೆ ಅಥವಾ ಮಸಿ ಬಳಿಯಲಾಗಿದೆ.

ರಾಜಧಾನಿ ಕಾಬೂಲ್‌ ಜತೆಗೆ ಇಡೀ ಅಫ್ಗಾನಿಸ್ತಾನದ ನಿಯಂತ್ರಣವು ತಾಲಿಬಾನ್‌ ಕೈಸೇರಿದೆ. ಸರ್ಕಾರ ಮತ್ತು ಪ್ರಾದೇಶಿಕ ಮುಖಂಡರ ಸೈನ್ಯವು ಹೆಚ್ಚಿನ ಪ್ರತಿರೋಧವನ್ನೇ ತೋರದೆ ತಲೆಬಾಗಿವೆ.

2001ರ ಹಿಂದೆ ತಾಲಿಬಾನ್‌ ಆಳ್ವಿಕೆ ಇದ್ದಾಗ ಮಹಿಳೆಯರು ಅತೀವ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಬಾರಿಯೂ ಅದು ಮರುಕಳಿಸಬಹುದು ಎಂಬ ಭೀತಿಯಲ್ಲಿ ಜನರು ಇದ್ದಾರೆ.

ADVERTISEMENT

2001ರ ನಂತರದ ಎರಡು ದಶಕಗಳಲ್ಲಿ ಕಾಬೂಲ್‌ನಲ್ಲಿ ಹತ್ತಾರು ಬ್ಯೂಟಿ ಪಾರ್ಲರ್‌ಗಳು ತಲೆ ಎತ್ತಿದ್ದವು. ದೇಹದ ಒಂದು ಕಣವನ್ನೂ ಹೊರಗೆ ತೋರಿಸಬಾರದು ಎಂಬ ನಿರ್ಬಂಧದಿಂದ ಹೊರಗೆ ಬಂದ ಮಹಿಳೆಯರು ಪ್ರಜಾಪ್ರಭುತ್ವದ
ಸ್ವಾತಂತ್ರ್ಯವನ್ನು ಸವಿಯತೊಡಗಿದ್ದು. ಅದರ ಪರಿಣಾಮವಾಗಿ ಕಾಬೂಲ್‌ನಲ್ಲಿ ಬ್ಯೂಟಿ ಪಾರ್ಲರ್‌ ಉದ್ಯಮವು ಸಮೃದ್ಧವಾಗಿ ಬೆಳೆದಿತ್ತು. ಈಗ,ಒಂದು ಕಾಲದಲ್ಲಿ ನಿಷೇಧಿತವಾಗಿದ್ದ ಈ ಪಾರ್ಲರ್‌ಗಳ ಹೊರಗೆ ಇರುವ ಮಹಿಳೆಯರ ಚಿತ್ರಗಳಿಗೆ ಮಸಿ ಬಳಿಯುವ ಕೆಲಸ ಈಗ
ನಡೆಯುತ್ತಿದೆ.

ಜಾಹೀರಾತಿನಲ್ಲಿ ಯುವತಿಯೊ ಬ್ಬಳು ರೂಪದರ್ಶಿಯಾಗಿದ್ದ ಚಿತ್ರವಿದ್ದ ಗೋಡೆಗೆ ಪಾರ್ಲರ್‌ನ ಮಾಲೀಕರೇ ಸುಣ್ಣ ಹೊಡೆಸುತ್ತಿದ್ದದ್ದು ಗುರುವಾರ ಕಂಡು ಬಂದಿದೆ. ಇನ್ನೊಂದು ಗೋಡೆಯಲ್ಲಿದ್ದ ಮಹಿಳೆಯ ಚಿತ್ರವನ್ನು ಮಸಿ ಬಳಿದು ಮುಚ್ಚಲಾಗಿದೆ.

1996–2001ರ ಆಳ್ವಿಕೆಯ ಅವಧಿಯಲ್ಲಿ ಮಹಿಳೆಯರನ್ನು ಕೆ‌ಟ್ಟದಾಗಿ ನಡೆಸಿಕೊಳ್ಳುವುದಕ್ಕೆ ತಾಲಿಬಾನ್‌ ಕುಖ್ಯಾತವಾಗಿತ್ತು. ಹೆಣ್ಣು ಮಕ್ಕಳಿಗೆ ಶಾಲಾ ಕಲಿಕೆ ನಿಷೇಧಿಸಲಾಗಿತ್ತು. ಗಂಡಸರ ಜತೆ ಸಂಪರ್ಕಕ್ಕೆ ಬರುವ ಯಾವ ಕೆಲಸಕ್ಕೂ ಅವಕಾಶ ಇರಲಿಲ್ಲ.

ಈ ಬಾರಿ, ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುವುದು ಎಂದು ತಾಲಿಬಾನ್‌ ಹೇಳಿದೆ. ಮಹಿಳೆಯರು ಇಡೀ ದೇಹ ಮುಚ್ಚುವ ಬುರ್ಖಾ ಧರಿಸುವ ಅಗತ್ಯ ಇಲ್ಲ ಎಂದು ತಾಲಿಬಾನ್‌ ವಕ್ತಾರ ಬ್ರಿಟನ್‌ನ ಸ್ಕೈ ನ್ಯೂಸ್‌ಗೆ ಹೇಳಿದ್ದಾರೆ. ಆದರೆ, ಯಾವ ರೀತಿಯ ದಿರಿಸು ಸ್ವೀಕಾರಾರ್ಹ ಎಂಬುದನ್ನು ಅವರು ತಿಳಿಸಿಲ್ಲ.

ಇಸ್ಲಾಂ ತತ್ವಗಳು ಮತ್ತು ಷರೀಯತ್‌ ನಿಯಮಗಳ ಪ್ರಕಾರ, ಮಹಿಳೆಯರು ಕೆಲಸವನ್ನೂ ಮಾಡಬಹುದು ಎಂದು ತಾಲಿಬಾನ್‌ ಹೇಳುತ್ತಿದೆ.

ಆದರೆ, ಜನರು ಹಾಗೆ ಭಾವಿಸಿಲ್ಲ. ‘ಅವರು ಮರಳಿ ಬಂದಿದ್ದಾರೆ. ನಮ್ಮ ಸ್ವಾತಂತ್ರ್ಯ ನಮಗೆಂದೂ ಮರಳಿ ಸಿಗದು. ಮಹಿಳೆಯರು ಕೆಲಸ ಮಾಡುವುದೇ ಅವರಿಗೆ ಬೇಕಿಲ್ಲ’ ಎಂದು 27 ವರ್ಷದ ಫರೀದಾ
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.