ADVERTISEMENT

ಉಗ್ರರಿಂದ ರಾಕೆಟ್‌ ದಾಳಿ: ಐಎಸ್‌ ಮೇಲೆ ಅಮೆರಿಕದ ಡ್ರೋನ್‌ ಕಾರ್ಯಾಚರಣೆ

ದಾಳಿ–ಪ್ರತಿದಾಳಿಯ ಪ್ರತೀಕಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:33 IST
Last Updated 29 ಆಗಸ್ಟ್ 2021, 19:33 IST
ದೇಶ ತೊರೆಯುವುದಕ್ಕಾಗಿ ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣ ದಾಖಲೆಪತ್ರಗಳ ಪರಿಶೀಲನೆಗೆ ಹೋಗಿದ್ದ ದಂಪತಿಯ ಮಗುವನ್ನು ಲಾಲಿಸುತ್ತಿರುವ ಅಮೆರಿಕದ ನೌಕಾಪಡೆಯ ಸದಸ್ಯೆ – ಎಎಫ್‌ಪಿ ಚಿತ್ರ.
ದೇಶ ತೊರೆಯುವುದಕ್ಕಾಗಿ ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣ ದಾಖಲೆಪತ್ರಗಳ ಪರಿಶೀಲನೆಗೆ ಹೋಗಿದ್ದ ದಂಪತಿಯ ಮಗುವನ್ನು ಲಾಲಿಸುತ್ತಿರುವ ಅಮೆರಿಕದ ನೌಕಾಪಡೆಯ ಸದಸ್ಯೆ – ಎಎಫ್‌ಪಿ ಚಿತ್ರ.    

ಕಾಬೂಲ್‌/ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರರ ದಾಳಿ ಮತ್ತು ಅದಕ್ಕೆ ಅಮೆರಿಕ ಸೈನಿಕರ ಪ್ರತಿದಾಳಿಯು ಮುಂದುವರಿದಿದೆ.

ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಾಯವ್ಯ ಪ್ರದೇಶದ ಮೇಲೆ ಭಾನುವಾರ ಸಂಜೆ ರಾಕೆಟ್‌ ದಾಳಿ ನಡೆದಿದೆ. ದಾಳಿಯಲ್ಲಿ ಮಗುವೊಂದು ಮೃತಪಟ್ಟಿದೆ.

ಅಫ್ಗಾನಿಸ್ತಾನವು ತಾಲಿಬಾನ್‌ ವಶವಾದ ನಂತರ ಅಮೆರಿಕವು ಅಲ್ಲಿಂದ ನಡೆಸುತ್ತಿರುವ ತೆರವು ಕಾರ್ಯಾ ಚರಣೆಯು ಅಂತಿಮ ಹಂತದಲ್ಲಿರುವಾಗ ಈ ದಾಳಿ ನಡೆದಿದೆ.

ADVERTISEMENT

ವಾಹನವೊಂದರಲ್ಲಿ ಕುಳಿತಿದ್ದ ಐಎಸ್‌ ಉಗ್ರನೊಬ್ಬನ ಮೇಲೆ ಅಮೆ ರಿಕದ ಸೈನಿಕರು ಭಾನುವಾರ ಡ್ರೋನ್‌ ಮೂಲಕ ದಾಳಿ ನಡೆಸಿದ್ದಾರೆ. ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಉದ್ದೇಶವನ್ನು ಉಗ್ರ ಹೊಂದಿದ್ದ ಎನ್ನಲಾಗಿದೆ.

ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಐ.ಎಸ್‌. ಉಗ್ರರು ಗುರುವಾರ ನಡೆಸಿದ್ದ ದಾಳಿಯಲ್ಲಿ 180 ಮಂದಿ ಮೃತಪಟ್ಟಿದ್ದರು. ಅಮೆರಿಕದ 13 ಸೈನಿಕರು ಕೂಡ ಬಲಿಯಾಗಿದ್ದರು. ಅದರ ಬಳಿಕ, ಐಎಸ್‌ ಮೇಲೆ ಅಮೆರಿಕವು ಭಾನುವಾರ ಎರಡನೇ ದಾಳಿಯನ್ನು ನಡೆಸಿದೆ.

ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿಯು ಅತ್ಯಂತ ಅಪಾಯಕಾರಿಯಾಗಿಯೇ ಇದೆ. ಒಂದೆರಡು ದಿನಗಳ ಒಳಗೆ ಉಗ್ರರು ಇನ್ನೊಂದು ದಾಳಿ ನಡೆಸುವುದು ಖಚಿತ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಶನಿವಾರ ಹೇಳಿದ್ದರು.

ಅಮೆರಿಕದ ಸೇನೆಯು ಹಿಂದಿರುಗಿದ ಬಳಿಕ ಐಎಸ್‌ ದಾಳಿಯು ತೀವ್ರಗೊಳ್ಳಲಿದೆ. ರಾಕೆಟ್‌ ಮತ್ತು ಸ್ಫೋಟಕ ತುಂಬಿದ ವಾಹನಗಳ ಮೂಲಕ ದಾಳಿ ನಡೆಯಬಹುದು ಎಂದು ಅಮೆರಿಕದ ಅಧಿಕಾರಿಗಳು ಎಚ್ಚರಿಕೆ ನೀಡಿದ್ಧಾರೆ.

ಐಎಸ್‌ ಉಗ್ರನ ಮೇಲೆ ನಡೆದ ಡ್ರೋನ್‌ ದಾಳಿಯನ್ನು ದೇಶದ ಹೊರಗಿನಿಂದ ನಿರ್ವಹಿಸಲಾಗಿದೆ. ಉಗ್ರನ ಬಳಿ ಗಣನೀಯ ಪ್ರಮಾಣದಲ್ಲಿ ಸ್ಫೋಟಕ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರದ ದಾಳಿಗೆ ಪ್ರತೀಕಾರವಾಗಿ ಶುಕ್ರವಾರ ನಡೆಸಿದ ದಾಳಿಯಲ್ಲಿ ಐಎಸ್‌ನ ಇಬ್ಬರು ಉಗ್ರರು ಹತ್ಯೆಯಾಗಿದ್ಧಾರೆ ಎಂದು ಅಮೆರಿಕ ಹೇಳಿದೆ. ಕಾಬೂಲ್‌ನ ಪೂರ್ವಕ್ಕೆ ಇರುವ ನಂಗರ್‌ಹರ್‌ ಪ್ರದೇಶದಲ್ಲಿ ಈ ದಾಳಿ ನಡೆದಿದೆ.

ತೆರೆದ ಬ್ಯಾಂಕು: ಅಫ್ಗಾನಿಸ್ತಾನದಲ್ಲಿರುವ ಖಾಸಗಿ ಬ್ಯಾಂಕುಗಳು ಭಾನುವಾರ ಕಾರ್ಯಾಚರಣೆ ಆರಂಭಿಸಿವೆ. ಆದರೆ, ಹಣ ಹಿಂತೆಗೆತಕ್ಕೆ ಮಿತಿ ಹೇರಲಾಗಿದೆ. ಪ್ರತಿ ದಿನ 200 ಡಾಲರ್‌ಗಿಂತ (ಸುಮಾರು ₹15 ಸಾವಿರ) ಹೆಚ್ಚು ಹಣ ಹಿಂದಕ್ಕೆ ಪಡೆಯುವಂತಿಲ್ಲ.ಹಣ ಪಡೆಯಲು ಸಾಧ್ಯವಾಗಿಲ್ಲ ಎಂದು ಹಲವರು ದೂರಿದ್ದಾರೆ.

ನಾಲ್ಕು ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ಸರ್ಕಾರಿ ನೌಕರರು ಹೇಳಿದ್ದಾರೆ.

ಸರ್ಕಾರ ರಚನೆಗೆ ಹೊಸ ವೇದಿಕೆ
ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಸಂಬಂಧ ತಾಲಿಬಾನ್ ನಾಯಕರ ಜತೆಗೆ ಮಾತುಕತೆ ನಡೆಸಲು ವಿವಿಧ ನಾಯಕರನ್ನೊಳಗೊಂಡ ಹೊಸ ವೇದಿಕೆಯೊಂದು ರಚನೆಯಾಗಿದೆ.ಇಬ್ಬರು ಪ್ರಾದೇಶಿಕ ನಾಯಕರು ಸೇರಿದಂತೆ ಅಫ್ಗನ್ ನಾಯಕರ ತಂಡವು ತಾಲಿಬಾನ್ ಜೊತೆ ಮಾತುಕತೆಗೆ ಮುಂದಾಗಿದೆ. ಮುಂಬರುವ ವಾರಗಳಲ್ಲಿ ಮಾತುಕತೆ ನಡೆಸಲು ಉದ್ದೇಶಿಸಿದೆ.

ಈ ಗುಂಪಿನಲ್ಲಿರುವ ಉಜ್ಬೆಕ್ ಬುಡಕಟ್ಟು ನಾಯಕ ಅಬ್ದುಲ್ ರಶೀದ್ ದೋಸ್ತಮ್ ಮತ್ತು ಇತರರು ತಾಲಿಬಾನ್ ಸ್ವಾಧೀನವನ್ನು ವಿರೋಧಿಸಿದ್ದಾರೆ ಎಂದುಬಾಲ್ಖ್ ಪ್ರಾಂತ್ಯದ ರಾಜ್ಯಪಾಲರಾಗಿದ್ದ ಮೊಹಮ್ಮದ್ ನೂರ್ ಅವರ ಪುತ್ರ ಖಾಲಿದ್ ನೂರ್ ಹೇಳಿದ್ದಾರೆ.

‘ನಾವು ಸಾಮೂಹಿಕವಾಗಿ ಮಾತುಕತೆ ನಡೆಸಲು ಬಯಸುತ್ತೇವೆ. ಅಫ್ಗಾನಿಸ್ತಾನದ ಸಮಸ್ಯೆಯನ್ನು ನಮ್ಮಲ್ಲಿ ಒಬ್ಬರೇ ಪರಿಹರಿಸಲಾಗದು.ಆದ್ದರಿಂದ, ದೇಶದ ರಾಜಕೀಯ ಸಮುದಾಯವು ವಿಶೇಷವಾಗಿ, ಸಾಂಪ್ರದಾಯಿಕ ನಾಯಕರು, ಅಧಿಕಾರ ಹೊಂದಿರುವವರು ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವುದು ಮುಖ್ಯ’ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣ ವಶಕ್ಕೆ ತಾಲಿಬಾನ್ ಸಜ್ಜು
ಕಾಬೂಲ್:
ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ತೊರೆಯಲು ಅಮೆರಿಕ ಸಜ್ಜಾಗಿರುವ ಬೆನ್ನಲ್ಲೇ ವಿಮಾನ ನಿಲ್ದಾಣವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಸಜ್ಜಾಗಿದೆ. ಉಳಿದ ನಾಗರಿಕರನ್ನುತೆರವುಗೊಳಿಸಿದ ಕೂಡಲೇ ಸೇನೆ ಅಮೆರಿಕಕ್ಕೆ ವಾಪಸಾಗಲಿದೆ.

ವಿಮಾನ ನಿಲ್ದಾಣದ ಉಸ್ತುವಾರಿ ವಹಿಸಿಕೊಳ್ಳಲು ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ತಾಲಿಬಾನ್‌ ಸಿದ್ಧಪಡಿಸಿದೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯಲು ಅಮೆರಿಕನ್ನರ ಅಂತಿಮ ಅನುಮೋದನೆಗಾಗಿ ನಾವು ಕಾಯುತ್ತಿದ್ದೇವೆ. ಎರಡೂ ಕಡೆಯವರು ಶೀಘ್ರ ಹಸ್ತಾಂತರ ಪ್ರಕ್ರಿಯೆ ಮುಗಿಸಲು ಉದ್ದೇಶಿಸಿದ್ದಾರೆ’ ಎಂದು ಅಧಿಕಾರಿ ಹೇಳಿದ್ದಾರೆ.

ಜನಪದ ಗಾಯಕ ಫವಾದ್ ಅಂದ್ರಾಬಿ ಹತ್ಯೆ
ಅಫ್ಗನ್ ಜನಪದ ಗಾಯಕ ಫವಾದ್ ಅಂದ್ರಾಬಿ ಅವರನ್ನು ತಾಲಿಬಾನ್ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬ ಭಾನುವಾರ ತಿಳಿಸಿದೆ.

ಅಫ್ಗನ್‌ನಲ್ಲಿ ಮರಳಿ ಅಧಿಕಾರ ಪಡೆದಿರುವ ತಾಲಿಬಾನ್, ತನ್ನ ಹಿಂದಿನ ಆಡಳಿತವನ್ನೇ ಜಾರಿಗೊಳಿಸುವ ಆತಂಕ ಈ ಘಟನೆಯಿಂದ ಎದುರಾಗಿದೆ. ಅಮೆರಿಕವು ಅಫ್ಗಾನಿಸ್ತಾನ ತೊರೆಯುವ ಸ್ವಲ್ಪ ಸಮಯದ ಮುನ್ನ ಈ ಘಟನೆ ನಡೆದಿದೆ.

ಕಾಬೂಲ್‌ನಿಂದ ಉತ್ತರ ದಿಕ್ಕಿಗಿರುವ ಅಂದ್ರಾಬಿ ಕಣಿವೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಾಲಿಬಾನ್ ಪ್ರಾಬಲ್ಯಕ್ಕೆ ಬಂದ ಬಳಿಕ ಕಣಿವೆಯಲ್ಲಿ ಕೆಲವು ವಿದ್ಯಮಾನಗಳು ನಡೆದಿವೆ. ಕೆಲವು ಜಿಲ್ಲೆಗಳಲ್ಲಿ ಸೇನಾ ಹೋರಾಟಗಾರರು ತಾಲಿಬಾನ್ ಆಡಳಿತ ವಿರೋಧಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.