ADVERTISEMENT

ಅಫ್ಗಾನಿಸ್ತಾನ | 6.0 ತೀವ್ರತೆಯ ಪ್ರಬಲ ಭೂಕಂಪ: 1,400ರ ಗಡಿ ದಾಟಿದ ಸಾವಿನ ಸಂಖ್ಯೆ

8 ಕಿ.ಮೀ ನೆಲದಾಳದಲ್ಲಿ ರಿಕ್ಟರ್‌ ಮಾಪಕದಲ್ಲಿ 6.0 ತೀವ್ರತೆಯ ಪ್ರಬಲ ಕಂಪನ; ಅಪಾರ ಹಾನಿ

ಪಿಟಿಐ
Published 2 ಸೆಪ್ಟೆಂಬರ್ 2025, 10:44 IST
Last Updated 2 ಸೆಪ್ಟೆಂಬರ್ 2025, 10:44 IST
<div class="paragraphs"><p>ಅಫ್ಗಾನಿಸ್ತಾನದಲ್ಲಿ ಭೂಕಂಪ</p></div>

ಅಫ್ಗಾನಿಸ್ತಾನದಲ್ಲಿ ಭೂಕಂಪ

   

ಕಾಬೂಲ್‌: ಹಿಂದು ಕುಶ್‌ ಪರ್ವತ ಶ್ರೇಣಿಗಳು, ಕುನಾರ್‌ ಕಣಿವೆಯ ಸೊಬಗಿನ ಪೂರ್ವ ಅಫ್ಗಾನಿಸ್ತಾನವು ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಭೂಕಂಪಕ್ಕೆ ತತ್ತರಿಸಿದೆ. ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ 1,400ಕ್ಕೂ ಹೆಚ್ಚು. 3 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಾರ ಸಂಖ್ಯೆಯ ಜನರು ನಿರಾಶ್ರಿತರಾಗಿದ್ದಾರೆ.

ರಾತ್ರಿ ಜನರು ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದ್ದರಿಂದ ಅಪಾಯದ ಮುನ್ಸೂಚನೆ ತಿಳಿಯ ದಾಯಿತು. ಮನೆಗಳಿಂದ ಹೊರಗೆ ಓಡಿಬಂದು ಜೀವ ಉಳಿಸಿ ಕೊಳ್ಳಲು ಹೆಚ್ಚಿನ ಜನರಿಗೆ ಆಗಲಿಲ್ಲ.

ADVERTISEMENT

ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸಾವು–ನೋವು ಸಂಭವಿಸಿದೆ. ಸೋಮವಾರ ಬೆಳಿಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯ 

ಗಾಯಗೊಂಡವರನ್ನು ರಕ್ಷಿಸಿ ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಗೋಳಾಡುತ್ತಿರುವ ದೃಶ್ಯ ಮನ ಕಲಕುವಂತಿದೆ. 

ಕುನಾರ್ಗ್ ಪ್ರಾಂತ್ಯದಲ್ಲಿ  ಹೆಚ್ಚಿನ ಮನೆಗಳನ್ನು ಮಣ್ಣಿನ ಇಟ್ಟಿಗೆ ಮತ್ತು ಮರ ಬಳಸಿ ನಿರ್ಮಿಸಲಾಗಿದೆ. ಕಳಪೆ ಗುಣಮಟ್ಟದ ಈ ಮನೆಗಳು ಭೂಕಂಪದಲ್ಲಿ ನಾಮಾವಶೇಷ ಆಗಿವೆ. ಕುನಾರ್‌ ಪ್ರಾಂತ್ಯದ ನುರ್ಗಲ್‌ ಜಿಲ್ಲೆಯಲ್ಲಿ ಗರಿಷ್ಠ ಹಾನಿ ಸಂಭವಿಸಿದೆ.

‘ವೃದ್ಧರು, ಮಕ್ಕಳು ಎಲ್ಲರೂ ಮಣ್ಣಿನಡಿ ಇದ್ದಾರೆ. ದಯವಿಟ್ಟು ನಮಗೆ ಸಹಾಯ ಮಾಡಿ. ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆದು ಅಂತ್ಯಸಂಸ್ಕಾರ ನೆರವೇರಿಸಿ’ ಎಂದು ಗ್ರಾಮಸ್ಥರೊಬ್ಬರು ನೋವಿನಿಂದ ನುಡಿದರು. 

ಬಿರುಗಾಳಿಯಂತೆ ಶಬ್ದ 

‘ದೊಡ್ಡ ಬಿರುಗಾಳಿ ಸಮೀಪಿಸುತ್ತಿರುವಂತೆ ಶಬ್ದ ಕೇಳಿಬಂತು. ತಕ್ಷಣವೇ ನಿದ್ರೆಯಲ್ಲಿದ್ದ ಮಕ್ಕಳನ್ನು ಎತ್ತಿಕೊಂಡು ಮನೆಯಿಂದ ಹೊರಗೋಡಿದೆ. ತಿರುಗಿ ನೋಡುವಷ್ಟರಲ್ಲಿ ನನ್ನ ಮನೆ, ನನ್ನ ಕಣ್ಣೆದುರೇ ನೆಲಸಮಗೊಂಡಿತು. ಮನೆಯಲ್ಲಿದ್ದವರು ಮಣ್ಣಿನಡಿ ಸಿಲುಕಿದರು’ ಎಂದು ಭೂಕಂಪದಲ್ಲಿ ಜೀವ ಉಳಿಸಿಕೊಮಡ ನುರ್ಗಲ್‌ನ ಮಜಾದರ್‌ ಪ್ರದೇಶದ ಸಿದ್ದಿಕ್‌ ಹೇಳಿದರು. 

ಅಫ್ಗಾನಿಸ್ತಾನದಲ್ಲಿ 2023ರ ಅಕ್ಟೋಬರ್‌ನಲ್ಲಿ ಸಂಭವಿಸಿದ ರಿಕ್ಟ್‌ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದು ಇದುವರೆಗಿನ ಭೀಕರ ದುರಂತ ಎಂದು ಅಲ್ಲಿನ ಸರ್ಕಾರ ಹೇಳಿದೆ.  

ಈ ಸಂಕಷ್ಟದ ಸಮಯದಲ್ಲಿ ಬಾಧಿತರಿಗೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು, ಪರಿಹಾರ ನೀಡಲು ಭಾರತ ಬದ್ಧವಾಗಿದೆ.
–ನರೇಂದ್ರ ಮೋದಿ, ಪ್ರಧಾನಿ (ಎಕ್ಸ್‌ ಪೋಸ್ಟ್‌ನಲ್ಲಿ) 
ಭೂಕಂಪದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕುನಾರ್ ಪ್ರಾಂತ್ಯಕ್ಕೆ ಸೇರಿದವರು. ಉಳಿದೆಡೆಗಿಂತ ಈ ಭಾಗದಲ್ಲಿ ಹೆಚ್ಚಿನ ಜೀವ ಹಾನಿ ಸಂಭವಿಸಿದೆ. 
–ಜಬೀಬುಲ್ಲಾ ಮುಜಾಹಿದ್‌, ತಾಲಿಬಾನ್‌ ಸರ್ಕಾರದ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.