ವಾಷಿಂಗ್ಟನ್: ‘ಉಕ್ರೇನ್‌ಗೆ ತೀವ್ರ ಅಗತ್ಯವಾಗಿರುವ ದೂರಗಾಮಿ ಸಾಮರ್ಥ್ಯವಿರುವ ಟೊಮಹಾಕ್ ಕ್ಷಿಪಣಿಗಳನ್ನು ಮಾರಾಟ ಮಾಡಲು ನಾನು ಇನ್ನೂ ಒಪ್ಪಿಗೆ ನೀಡಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಡೊನಾಲ್ಡ್ ಟ್ರಂಪ್ ಜೊತೆಗೆ ಗುರುವಾರ ದೀರ್ಘಾವಧಿ ಫೋನ್ ಸಂಭಾಷಣೆ ನಡೆಯಿತು. ಒಂದು ದಿನದ ನಂತರ ಝೆಲೆನ್‌ಸ್ಕಿ ಜೊತೆಗೆ ಟ್ರಂಪ್ ಸಭೆ ನಿಗದಿಯಾಗಿದೆ.
‘ಟೊಮಹಾಕ್ ಕ್ಷಿಪಣಿಗಳನ್ನು ಉಕ್ರೇನ್‌ಗೆ ಮಾರಾಟ ಮಾಡಲು ಟ್ರಂಪ್ ತೀವ್ರ ಆಸಕ್ತಿ ವಹಿಸಿದ್ದರು. ಆ ರೀತಿ ಮಾಡಿದರೆ, ಅಮೆರಿಕ ಹಾಗೂ ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಹದಗೆಡಲಿದೆ’ ಎಂದು ಪುಟಿನ್ ಎಚ್ಚರಿಕೆ ನೀಡಿದ್ದರು.
ಟೊಮಹಾಕ್ ಕ್ಷಿಪಣಿಗಳು 1,600 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ರಷ್ಯಾದ ಪ್ರಮುಖ ಸೇನಾ ನೆಲೆಗಳು, ಇಂಧನ ಕೇಂದ್ರಗಳು, ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲು ಈ ಕ್ಷಿಪಣಿಗಳು ಉಕ್ರೇನ್‌ಗೆ ಅಗತ್ಯವಿದೆ ಎಂದು ಝೆಲೆನ್‌ಸ್ಕಿ ಆಗ್ರಹಿಸುತ್ತಿದ್ದಾರೆ. ಕ್ಷಿಪಣಿ ಮಾರಾಟದ ಬಗ್ಗೆ ಟ್ರಂಪ್ ಜೊತೆ ಗುರುವಾರ ನಡೆದ ದೂರವಾಣಿ ಮಾತುಕತೆಯಲ್ಲಿ ಪುಟಿನ್ ಅಸಮಾಧಾನ ಹೊರಹಾಕಿದ್ದಾರೆ.
ಆದಾದ ಬಳಿಕ ಟ್ರಂಪ್ ಕೂಡ ಕ್ಷಿಪಣಿ ಮಾರಾಟದ ವಿಚಾರದಲ್ಲಿ ನಿರಾಸಕ್ತಿ ವಹಿಸಿದ್ದಾರೆ. ‘ಅಮೆರಿಕಕ್ಕೂ ಟೊಮಹಾಕ್ ಕ್ಷಿಪಣಿಗಳು ಬೇಕಿವೆ. ನಮ್ಮಲ್ಲಿ ಸಾಕಷ್ಟು ಇವೆಯಾದರೂ ಇನ್ನೂ ಹೆಚ್ಚು ಬೇಕಿದೆ. ನಾವು ಬೇರೆಯವರಿಗಾಗಿ ಅದನ್ನು ಖಾಲಿ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.