ADVERTISEMENT

US | ಒಳಗಿರುವವರು ಯಾರು ಗೊತ್ತಾ.. ವೈಟ್‌ ಅಂಡ್‌ ಬ್ಲೂ; ಟ್ರಂಪ್ ಕುರಿತು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 6:20 IST
Last Updated 18 ಸೆಪ್ಟೆಂಬರ್ 2025, 6:20 IST
   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಲಂಡನ್ ಪ್ರವಾಸ ಕೈಗೊಂಡಿದ್ದು, ಬ್ರಿಟನ್‌ನಲ್ಲಿ ವ್ಯಾಪಕ ಪ್ರತಿಭಟನೆ, ಅಮೆರಿಕದ ಮೊದಲ ಮಹಿಳೆಯ ಉಡುಪಿನ ಆಯ್ಕೆ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ ಇದೇ ಅವಧಿಯಲ್ಲಿ ಟ್ರಂಪ್ ಪ್ರಯಾಣಿಸುತ್ತಿದ್ದ ಅಧ್ಯಕ್ಷರ ಏರ್‌ಫೋರ್ಸ್ ಒನ್‌ ವಿಮಾನದ ಸಮೀಪವೇ ಸ್ಪಿರಿಟ್ ಏರ್‌ಲೈನ್ಸ್‌ ವಿಮಾನ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವರದಿಯ ಪ್ರಕಾರ, ಪ್ರಯಾಣಿಕರನ್ನು ಹೊತ್ತ ಸ್ಪಿರಿಟ್ ಏರ್‌ಲೈನ್ಸ್‌ಗೆ ಸೇರಿದ ಏರ್‌ಬಸ್‌ ಎಸ್‌ಇ ಎ321 ಮಾದರಿಯ 1300 ಸಂಖ್ಯೆಯ ವಿಮಾನವು ಏರ್‌ಫೋರ್ಸ್‌ ಒನ್‌ನ ಅತ್ಯಂತ ಸಮೀಪ ಹಾರಾಟ ನಡೆಸಿದೆ. ಮಾರ್ಗ ಬದಲಿಸುವಂತೆ ವಾಯು ಸಂಚಾರ ನಿಯಂತ್ರಕರು ನಿರಂತರ ಎಚ್ಚರಿಕೆಯನ್ನು ಸ್ಪಿರಿಟ್ ಏರ್‌ಲೈನ್ಸ್‌ ವಿಮಾನದ ಪೈಲೆಟ್‌ಗೆ ನೀಡಿದರೂ, ಏರ್‌ಫೋರ್ಸ್‌ ಒನ್‌ ಎತ್ತರದಲ್ಲೇ ಸಾಗುತ್ತಿದ್ದ ವಿಡಿಯೊ ಸಹಿತ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆದರೆ ಎರಡೂ ವಿಮಾನಗಳು ಪರಸ್ಪರ ಸುರಕ್ಷತಾ ವಲಯವನ್ನು ಪ್ರವೇಶಿಸದ ಕಾರಣ ದೊಡ್ಡ ಅಪಾಯ ತಪ್ಪಿದೆ. ಬದಲಿಗೆ ವಾಯು ಸಂಚಾರ ನಿಯಂತ್ರಕರು ಸ್ಪಿರಿಟ್ ಏರ್‌ಲೈನ್ಸ್‌ಗೆ ನೀಡಿದ ಎಚ್ಚರಿಕೆಯ ಸಂದೇಶದ ಧ್ವನಿ ಮುದ್ರಣ ಚರ್ಚೆಗೆ ಕಾರಣವಾಗಿದೆ.

ADVERTISEMENT

ಎರಡೂ ವಿಮಾನಗಳು ಒಂದೇ ಎತ್ತರದಲ್ಲಿ ಅತ್ಯಂತ ಸಮೀಪದಲ್ಲಿ ಹಾರಾಟ ನಡೆಸುತ್ತಿರುವುದನ್ನು ಗಮನಿಸಿದ ನ್ಯೂಯಾರ್ಕ್ ಮೂಲದ ವಾಯು ಸಂಚಾರ ನಿಯಂತ್ರಕರು ಸ್ಪಿರಿಟ್‌ನ ಪೈಲೆಟ್‌ಗೆ ನಿರಂತರವಾಗಿ ಎಚ್ಚರಿಕೆ ನೀಡಿದ್ದಾರೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಅವರು, ‘ಗಮನ ನೀಡಿ’ ಎಂದು ಗದರಿದ್ದಾರೆ. ಅದಕ್ಕೂ ಪ್ರತಿಕ್ರಿಯಿಸದ ಪೈಲೆಟ್‌ಗೆ, ‘ನಿಮ್ಮ ಐಪ್ಯಾಡ್ ಅನ್ನು ಬದಿಗಿಡಿ’ ಎಂದು ಹೇಳಿದ್ದು ಎಲ್ಲೆಡೆ ಹರಿದಾಡುತ್ತಿದೆ.

‘ಗಮನ ನೀಡಿ, ಸ್ಪಿರಿಟ್‌ 1300, 20 ಡಿಗ್ರಿ ಬಲಕ್ಕೆ ತಿರುಗಿಸಿ. ಸ್ಪಿರಿಟ್ 1300 ಈಗಲೇ 20 ಡಿಗ್ರಿ ಬಲಕ್ಕೆ ತಿರುಗಿಸಿ, ಸ್ಪಿರಿಟ್ ವಿಂಗ್ಸ್‌ ಈ ತಕ್ಷಣ 20 ಡಿಗ್ರಿ ಬಲಕ್ಕೆ ತಿರುಗಿಸಿ. ಗಮನ ನೀಡಿ ಸ್ಪಿರಿಟ್ 1300 6 ಮೈಲ್‌ನ ನಿಮ್ಮ ಎಡಕ್ಕೆ ಸಂಚಾರ ನಿರ್ಬಂಧಿಸಲಾಗಿದೆ. ನಿಮ್ಮ ಸಮೀಪದಲ್ಲಿರುವ ವಿಮಾನದಲ್ಲಿ ಯಾರಿದ್ದಾರೆಂದು ನಿಮಗೆ ಗೊತ್ತಿದೆ ಅಂದುಕೊಳ್ಳುತ್ತೇನೆ... ಅವರೇ ‘ವೈಟ್‌ ಅಂಡ್‌ ಬ್ಲೂ’ ಎಂದು ಟ್ರಂಪ್ ಅವರ ಏರ್‌ಫೋರ್ಸ್‌ ಒನ್ ಕುರಿತು ನಿಯಂತ್ರಕರು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಫೆಡರಲ್ ಏವಿಯೇಷನ್ ಅಡ್‌ಮಿನಿಸ್ಟ್ರೇಷನ್‌, 'ಯಾವುದೇ ಸುರಕ್ಷತಾ ಎಚ್ಚರಿಕೆ ತೆಗೆದುಕೊಳ್ಳದೇ ಕೈಗೊಂಡ ಕ್ರಮವಿದು’ ಎಂದಿದೆ.

ಘಟನೆಗೆ ಪ್ರತಿಕ್ರಿಯಿಸಿರುವ ಸ್ಪಿರಿಟ್ ಏರ್‌ಲೈನ್ಸ್‌, ‘ಸುರಕ್ಷತೆಗೆ ನಮ್ಮ ಮೊದಲ ಆದ್ಯತೆ. ವಿಮಾನವು ಎಲ್ಲಾ ನಿಯಮ ಹಾಗೂ ವಾಯು ಸಂಚಾರ ನಿಯಂತ್ರಕರ ಸೂಚನೆಗಳನ್ನು ಪಾಲಿಸಿದೆ. ಸುರಕ್ಷತಿವಾಗಿ ಬೋಸ್ಟನ್‌ನಲ್ಲಿ ಬಂದಿಳಿದಿದೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.