ADVERTISEMENT

ಅಲಾಸ್ಕಾ ಏರ್‌ಲೈನ್ಸ್‌: ಮತ್ತೊಮ್ಮೆ 737 ಮ್ಯಾಕ್ಸ್‌ 9 ವಿಮಾನಗಳ ಹಾರಾಟ ಸ್ಥಗಿತ

ಏಜೆನ್ಸೀಸ್
Published 8 ಜನವರಿ 2024, 15:34 IST
Last Updated 8 ಜನವರಿ 2024, 15:34 IST
<div class="paragraphs"><p>ಅಲಾಸ್ಕಾ ಏರ್‌ಲೈನ್ಸ್‌</p></div>

ಅಲಾಸ್ಕಾ ಏರ್‌ಲೈನ್ಸ್‌

   

ಪೋರ್ಟ್‌ಲೆಂಡ್‌: ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್‌ ಸಂಸ್ಥೆಯು ತನ್ನ ಬಳಿಯಿರುವ ಎಲ್ಲಾ ಬೋಯಿಂಗ್‌ 737 ಮ್ಯಾಕ್ಸ್‌ 9 ವಿಮಾನಗಳ ಕಾರ್ಯಾಚರಣೆಯನ್ನು ಭಾನುವಾರ ಮತ್ತೊಮ್ಮೆ ಸ್ಥಗಿತಗೊಳಿಸಿದೆ. ವಿಮಾನಗಳನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಬೇಕು ಎಂದು ಅಮೆರಿಕದ ನಾಗರಿಕ ವಿಮಾನಯಾನ ಪ್ರಾಧಿಕಾರ (ಎಫ್‌ಎಎ) ನೋಟಿಸ್‌ ನೀಡಿದ ಬಳಿಕ ಸಂಸ್ಥೆಯು ಈ ಕ್ರಮ ಕೈಗೊಂಡಿದೆ.  

171 ಮಂದಿ ಪ್ರಯಾಣಿಕರಿದ್ದ ಬೋಯಿಂಗ್‌ 737–9 ಮ್ಯಾಕ್ಸ್‌ ವಿಮಾನವೊಂದು ಹಾರಾಟ ನಡೆಸುತ್ತಿದ್ದ ವೇಳೆಯೇ ಅದರ ಒಂದು ಕಿಟಕಿ, ಮತ್ತೊಂದು ಭಾಗ ಹಾರಿಹೋದ ಘಟನೆ ಶುಕ್ರವಾರ ನಡೆದಿತ್ತು. ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಗಿತ್ತು. ಆ ಬಳಿಕ ಸಂಸ್ಥೆಯು ತನ್ನ ಬಳಿಯಿರುವ 65 ಮ್ಯಾಕ್ಸ್‌ 9 ವಿಮಾನಗಳನ್ನು ತಪಾಸಣೆಗೊಳಪಡಿಸಿತ್ತು. ಅವುಗಳಲ್ಲಿ 18ನ್ನು ದುರಸ್ತಿಗೆ ಒಳಪಡಿಸಿತ್ತು.

ADVERTISEMENT

ವಿಮಾನಗಳನ್ನು ಇನ್ನೂ ಹೆಚ್ಚಿನ ತಪಾಸಣೆಗೆ ಒಳಪಡಿಸಬೇಕು ಎಂದು ಎಫ್‌ಎಎ ನೋಟಿಸ್‌ ನೀಡಿರುವ ಕಾರಣ 737 ಮ್ಯಾಕ್ಸ್‌ 9 ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ವಿಮಾನಗಳ ಸುರಕ್ಷತೆ ಕುರಿತು ಎಫ್‌ಎಎ ಖಚಿತಪಡಿಸಿದ ಬಳಿಕ ಇವನ್ನು ಸೇವೆಗೆ ಮರಳಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಅಲಾಸ್ಕಾ ಏರ್‌ಲೈನ್ಸ್‌ ಕಾರ್ಯಾಚರಿಸುತ್ತಿರುವ ಒಟ್ಟು ವಿಮಾನಗಳಲ್ಲಿ ಶೇ 20ರಷ್ಟು ಮ್ಯಾಕ್ಸ್‌ 9 ವಿಮಾನಗಳು ಇವೆ. ಯುನೈಟೆಡ್‌ ಏರ್‌ಲೈನ್ಸ್‌ ಕೂಡ ತನ್ನ ಬಳಿಯಿರುವ ಮ್ಯಾಕ್ಸ್‌ 9 ವಿಮಾನಗಳ ಹಾರಾಟವನ್ನು ಭಾನುವಾರ ಸ್ಥಗಿತಗೊಳಿಸಿತ್ತು. ಅಮೆರಿಕದ ಶೇ 10ರಷ್ಟು ವಿಮಾನಗಳು ಭಾನುವಾರ ಕಾರ್ಯಾಚರಿಸಲಿಲ್ಲ ಎನ್ನಲಾಗಿದೆ.

ದಿ ನ್ಯಾಷನಲ್‌ ಟ್ರಾನ್ಸ್‌ಪೊರ್ಟೇಷನ್‌ ಸೇಫ್ಟಿ ಬೋರ್ಡ್‌ (ಎನ್‌ಟಿಎಸ್‌ಬಿ) ಕೂಡಾ ಶುಕ್ರವಾರದ ಘಟನೆ ಕುರಿತು ತನಿಖೆ ನಡೆಸುತ್ತಿದೆ. ಹಾರಾಟದ ವೇಳೆ ಕಳಚಿದ ಕಿಟಕಿಗಾಗಿ ಹುಡುಕಾಟ ನಡೆಸುತ್ತಿದೆ. ಅದೃಷ್ಟವಶಾತ್‌, ವಿಮಾನವು ಕ್ರೂಸಿಂಗ್‌ ಹಂತವನ್ನು ದಾಟಿರಲಿಲ್ಲ. ಕಳಚಿದ ಕಿಟಕಿ ಬಳಿಯ ಸೀಟುಗಳಲ್ಲಿ ಯಾರೂ ಕುಳಿತಿರಲಿಲ್ಲ ಎಂದು ಎನ್‌ಟಿಎಸ್‌ಬಿ ಹೇಳಿದೆ.

ಜಗತ್ತಿನ ವಿವಿಧ ವಿಮಾನಯಾನ ಸಂಸ್ಥೆಗಳು ಒಟ್ಟು 171 ಬೋಯಿಂಗ್‌ 737 ಮಾಕ್ಸ್‌ 9 ವಿಮಾನಗಳನ್ನು ಕಾರ್ಯಾಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.