ADVERTISEMENT

Explainer: ಇಂಡೋನೇಷ್ಯಾದಲ್ಲೇ ಏಕೆ ಹೆಚ್ಚು ವಿಮಾನ ಅಪಘಾತ?

ಏಜೆನ್ಸೀಸ್
Published 12 ಜನವರಿ 2021, 9:14 IST
Last Updated 12 ಜನವರಿ 2021, 9:14 IST
ಸಮುದ್ರದಲ್ಲಿ ಪತನಗೊಂಡ ಇಂಡೊನೇಷ್ಯಾ ವಿಮಾನದ ಅವಶೇಷಗಳು (ಎಎಫ್‌ಪಿ ಚಿತ್ರ)
ಸಮುದ್ರದಲ್ಲಿ ಪತನಗೊಂಡ ಇಂಡೊನೇಷ್ಯಾ ವಿಮಾನದ ಅವಶೇಷಗಳು (ಎಎಫ್‌ಪಿ ಚಿತ್ರ)   

ಜಕಾರ್ತ:ಶನಿವಾರ 62 ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಇಂಡೋನೇಷ್ಯಾದ ಶ್ರೀವಿಜಯ ಏರ್‌ಲೈನ್‌ನ ಬೋಯಿಂಗ್‌ 737–500 ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡು ಸಮುದ್ರಕ್ಕೆ ಬಿದ್ದಿದೆ. ಈ ಅಪಘಾತ ಇಂಡೋನೇಷ್ಯಾದ ವಾಯುಯಾನ ಉದ್ಯಮದ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನೆಗೀಡು ಮಾಡಿದೆ.

1945 ರಿಂದ ಈ ವಲಯದ ಇತರೆ ದೇಶಗಳಿಗಿಂತ ಅತಿ ಹೆಚ್ಚು ನಾಗರಿಕ ವಿಮಾನಗಳ ಅಪಘಾತಗಳು ಇಲ್ಲಿ ಸಂಭವಿಸಿದ್ದು, ಇಂಡೋನೇಷ್ಯಾದ ವಾಯುಯಾನ ದಾಖಲೆಯು ಏಷ್ಯಾದಲ್ಲೇ ಅತ್ಯಂತ ಕೆಟ್ಟದಾಗಿದೆ, ಕಳಪೆ ಪೈಲಟ್ ತರಬೇತಿ, ಯಾಂತ್ರಿಕ ವೈಫಲ್ಯಗಳು, ವಾಯು ಸಂಚಾರ ನಿಯಂತ್ರಣ ಸಮಸ್ಯೆಗಳು ಮತ್ತು ವಿಮಾನಗಳ ಕಳಪೆ ನಿರ್ವಹಣೆ ಹಿಂದಿನ ಅಪಘಾತಗಳಿಗೆ ಕಾರಣವಾಗಿದೆ.

ಇತ್ತೀಚಿನ ದಿನಗಳಲ್ಲಿ ಇಂಡೋನೇಷ್ಯಾ ವೈಮಾನಿಕ ಉದ್ಯಮದಲ್ಲಿ ಬಹಳಷ್ಟು ಸುಧಾರಣೆ ಆಗಿದೆ ಎಂದು ಪರಿಣಿತರು ಹೇಳಿತ್ತಿದ್ದರೂ ಸಹ ನಿನ್ನೆ ಸಂಭವಿಸಿದ ಈ ವಿಮಾನ ದುರಂತದ ಬಳಿಕ ಇಂಡೋನೇಷ್ಯಾದ ವಾಯುಯಾನ ಮೇಲ್ವಿಚಾರಣೆ ಮತ್ತು ನಿಯಂತ್ರಣದ ನಿಜವಾದ ಪ್ರಗತಿಯನ್ನು ಮತ್ತೊಂದು ತಜ್ಞರ ಗುಂಪು ಪ್ರಶ್ನಿಸುತ್ತಿದೆ.

ADVERTISEMENT

ಆರ್ಥಿಕ, ಸಾಮಾಜಿಕ ಮತ್ತು ಭೌಗೋಳಿಕ ಅಂಶಗಳ ಕಾರಣಗಳಿಂದಇಂಡೋನೇಷ್ಯಾದಲ್ಲಿ ವಿಮಾನ ಅಪಘಾತ ಸಂಭವಿಸುತ್ತಿದೆಯೇ?

1990 ರ ದಶಕದ ಉತ್ತರಾರ್ಧದಲ್ಲಿ ಸುಹಾರ್ಟೊ ಪತನದ ನಂತರ ದಶಕಗಳ ಸರ್ವಾಧಿಕಾರಗಳ ಕೊನೆಗೊಂಡು ಆರ್ಥಿಕತೆ ಚೇತರಿಕೆ ಆರಂಭವಾದಾಗ ಇಂಡೋನೇಷ್ಯಾದ ವಾಯುಯಾನದ ಆರಂಭಿಕ ವರ್ಷಗಳಲ್ಲಿ ವಾಯುಯಾನ ಉದ್ಯಮದ ಬಗ್ಗೆ ಕಡಿಮೆ ನಿಯಂತ್ರಣ ಅಥವಾ ಅಷ್ಟು ಮೇಲ್ವಿಚಾರಣೆ ಇರಲಿಲ್ಲ.

2018 ರಲ್ಲಿ ವಿಮಾನ ಅಪಘಾತಕ್ಕೀಡಾಗಿ, 189 ಜನರನ್ನು ಬಲಿ ತೆಗೆದುಕೊಂಡ ಲಯನ್ ಏರ್ ಸೇರಿದಂತೆ ಸೇರಿದಂತೆ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಗಳ ಪ್ರವಾಹ ಉಂಟಾಯಿತು, ಇದು ವಿಶಾಲವಾದ ದ್ವೀಪಸಮೂಹ ರಾಷ್ಟ್ರದಾದ್ಯಂತ ಈಗಲೂ ದಕ್ಷ ಅಥವಾ ಸುರಕ್ಷಿತ ಸಾರಿಗೆ ಮೂಲಸೌಕರ್ಯಗಳ ಕೊರತೆ ಇರುವ ಹಲವು ಪ್ರದೇಶಗಳಿಗೆ ಸಾಮಾನ್ಯ ಜನರು ಪ್ರಯಾಣಿಸಲು ಅನುವು ಮಾಡಿಕೊಟ್ಟಿತು, .

ವಾಯುಯಾನ ಸುರಕ್ಷಾ ಜಾಲದ ಮಾಹಿತಿ ಪ್ರಕಾರ, ಇಂಡೋನೇಷ್ಯಾದಲ್ಲಿ 1945 ರಿಂದ 104 ನಾಗರಿಕ ವಿಮಾನ ಅಪಘಾತಗಳು ನಡೆದಿದ್ದು, 1,300 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿವೆ. ಹಾಗಾಗಿ, ವೈಮಾನಿಕ ಸಂಚಾರದಲ್ಲಿ ಇದು ಇದು ಏಷ್ಯಾದಲ್ಲಿ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.

"ತಾಂತ್ರಿಕ ಪರಿಣತಿ, ತರಬೇತಿ ಪಡೆದ ಸಿಬ್ಬಂದಿ, ದಾಖಲೆ ನಿರ್ವಹಣೆ ಅಥವಾ ತಪಾಸಣೆ ಕಾರ್ಯವಿಧಾನಗಳಂತಹ ಹಲವು ಕೊರತೆ." ಇದ್ದ ಕಾರಣ ಅಮೆರಿಕವು 2007 ರಿಂದ 2016 ರವರೆಗೆ ಇಂಡೋನೇಷ್ಯಾದ ವಿಮಾನಯಾನ ಸಂಸ್ಥೆಗಳನ್ನು ಆ ದೇಶದಲ್ಲಿ ಕಾರ್ಯನಿರ್ವಹಣೆಗೆ ನಿಷೇಧ ಹೇರಿತ್ತು.

ಈಗ ಅವು ಸುಧಾರಿಸಿವೆ?

ಹೌದು, ಅವು ಸುಧಾರಿಸಿವೆ.

"ಇಂಡೋನೇಷ್ಯಾ ವೈಮಾನಿಕ ಉದ್ಯಮದಲ್ಲಿ ಪ್ರಯಾಣಿಕರ ಸಂಖ್ಯೆಯು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಮೇಲ್ವಿಚಾರಣೆ ಹೆಚ್ಚು ಕಠಿಣವಾಗಿದೆ" ಎಂದು ವಾಯುಯಾನ ತಜ್ಞ ಮತ್ತು ಏರ್‌ಲೈನ್ ರೇಟಿಂಗ್ಸ್.ಕಾಮ್‌ನ ಪ್ರಧಾನ ಸಂಪಾದಕ ಜೆಫ್ರಿ ಥಾಮಸ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

ಆಗಾಗ್ಗೆ ವಿಮಾನಗಳ ತಪಾಸಣೆ ಹೆಚ್ಚಾಗಿದೆ, ನಿರ್ವಹಣಾ ಸೌಲಭ್ಯಗಳು, ಕಾರ್ಯವಿಧಾನಗಳ ಬಲವಾದ ನಿಯಂತ್ರಣ ಮತ್ತು ಉತ್ತಮ ಪೈಲಟ್ ತರಬೇತಿಯನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

2016 ರಲ್ಲಿ ಅಮೆರಿಕದ ಫೆಡರಲ್ ವೈಮಾನಿಕ ಆಡಳಿತವು ಇಂಡೋನೇಷ್ಯಾಕ್ಕೆ ಗ್ರೇಡ್ 1 ರೇಟಿಂಗ್ ನೀಡಿತ್ತು, ಅಂದರೆ, ಆ ದೇಶವು ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ನಿರ್ಧರಿಸಲಾಯಿತು.

ಹಾಗಾದರೆ, ಮತ್ತೊಂದು ಹೊಸ ವಿಮಾನ ಪತನ ಹೇಗಾಯ್ತು?

ಈ ಬಗ್ಗೆ ಏನನ್ನಾದರೂ ಹೇಳುವುದು ತುಂಬಾ ಬೇಗ ಎನಿಸುತ್ತದೆ.. ವಿಮಾನವು ನಿರ್ಗಮಿಸಿದ ಜಕಾರ್ತದಲ್ಲಿ ಕೆಟ್ಟ ಹವಾಮಾನ, ಮಾನವ ದೋಷ, ವಿಮಾನಗಳ ಸ್ಥಿತಿ ಸೇರಿದಂತೆ ಹಲವಾರು ಕಾರಣಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಅಪಘಾತದ ಸಂದರ್ಭ ಭಾರಿ ಸ್ಫೋಟ ಶಬ್ಧ ಕೇಳಿಸಿದ್ದಾಗಿ ಅಲ್ಲಿದ್ದ ಮೀನುಗಾರರು ಹೇಳಿದ್ದಾರೆ. ಅವರ ದೋಣಿ ಸುತ್ತಲೂ ಅವಶೇಷಗಳು ಮತ್ತು ಇಂಧನ ಹರಡಿತ್ತು. ಆದರೆ, ಭಾರೀ ಮಳೆ ಇದ್ದ ಅಷ್ಟಾಗಿ ಕಾಣಿಸುತ್ತಿರಲಿಲ್ಲವಾದ್ದರಿಂದ ಘಟನೆ ಬಗ್ಗೆ ಅವರು ಹೆಚ್ಚು ಏನನ್ನೂ ನೋಡಲು ಸಾಧ್ಯವಾಗಲಿಲ್ಲ.

ಶ್ರೀವಿಜಯ ಏರ್‌ಲೈನ್‌ನಲ್ಲಿ ಈ ಹಿಂದೆ ಸಣ್ಣ ಘಟನೆಗಳು ನಡೆದ ಉದಾಹರಣೆಗಳಿವೆ. 2008ರಲ್ಲಿ ಹೈಡ್ರಾಲಿಕ್ ದೋಷದಿಂದ ವಿಮಾನವು ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಪಕ್ಕಕ್ಕೆ ಸರಿದಿದ್ದರಿಂದ ರೈತನೊಬ್ಬ ಸಾವಿಗೀಡಾಗಿದ್ದ.

ಅಪಘಾತಕ್ಕೀಡಾದ ವಿಮಾನವು 26 ವರ್ಷ ಹಳೆಯದು. ಈ ಹಿಂದೆ ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆ ಬಳಸುತ್ತಿದ್ದ ವಿಮಾನವಾಗಿದ್ದು, ಹಾರಾಟಕ್ಕೆ ಯೋಗ್ಯ ವಿಮಾನವಾಗಿತ್ತು ಎಂದು ವಿಮಾನಯಾನ ಸಂಸ್ಥೆಯ ಅಧ್ಯಕ್ಷ ನಿರ್ದೇಶಕ ಜೆಫರ್ಸನ್ ಇರ್ವಿನ್ ಜೌವೆನಾ ಹೇಳಿದ್ದಾರೆ. ಈ ಹಿಂದೆ ಅದೇ ದಿನ ವಿಮಾನ ಹಾರಾಟ ನಡೆಸಿತ್ತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಆದರೆ, ವಿಮಾನವು ಹಾರಾಟಕ್ಕೆ ಯೋಗ್ಯವಾಗಿತ್ತೇ? ಎನ್ನುವುದನ್ನು ಪರಿಣಿತರು ನಿರ್ಧರಿಸಬೇಕಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಯಾವಾಗ ಸಿಗಲಿದೆ?

ಭಾನುವಾರ ಅಪಘಾತದ ಸ್ಥಳದಲ್ಲಿ ಅವಶೇಷ ಮತ್ತು ವಿಮಾನದ ಕಪ್ಪು ಪೆಟ್ಟಿಗೆಯನ್ನು ಪತ್ತೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಮುದ್ರದಿಂದ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಹೊರತೆಗೆಯಲು ಪ್ರಸ್ತುತ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಪ್ಪು ಪೆಟ್ಟಿಗೆಗಳು ಸೇರಿದಂತೆ ನೀರಿನಿಂದ ಹೊರತೆಗೆದ ವಸ್ತುಗಳು ಘಟನೆ ಕುರಿತಂತೆ ಬೆಳಕು ಚೆಲ್ಲಲಿವೆ.

ವಿಮಾನ ಅಪಘಾತದ ತನಿಖೆಗೆ ವಾರಗಳು ಅಥವಾ ತಿಂಗಳುಗಳು ಬೇಕಾಗಬಹುದು ಎಂದು ಇಂಡೋನೇಷ್ಯಾದ ವಾಯುಯಾನ ಸಲಹೆಗಾರ ಗೆರ್ರಿ ಸೂಜಾಟ್ಮನ್ ಹೇಳಿದ್ದಾರೆ.

ಅಂತಾರರಾಷ್ಟ್ರೀಯ ನೆರವಿನ ಜೊತೆಗೆ ಇಂಡೋನೇಷ್ಯಾ ತನಿಖೆಯನ್ನು ಮುನ್ನಡೆಸುತ್ತದೆ. ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯಿಂದ ಒಂದು ತಿಂಗಳೊಳಗೆ ಮಧ್ಯಂತರ ವರದಿ ಬರಬಹುದು ಎಂದು ಸೂಜತ್ಮಾನ್ ಹೇಳಿದ್ದಾರೆ.

"ಆ ವರದಿಯೊಂದಿಗೆ ವಿಶ್ಲೇಷಣೆ ಪ್ರಾರಂಭವಾಗುತ್ತದೆ" ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.