ಪೆಶಾವರ : ವಾಯವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ಸುಮಾರು 1,300 ವರ್ಷಗಳ ಹಿಂದೆನಿರ್ಮಿಸಲಾಗಿದ್ದು ಎಂದು ಅಂದಾಜಿಸಲಾಗಿರುವ, ಹಿಂದೂ ದೇವಾಲಯವೊಂದನ್ನು ಇಟಲಿಯ ಪುರಾತತ್ವ ಸಂಶೋಧಕರು ಪತ್ತೆ ಮಾಡಿದ್ದಾರೆ.
‘ಬಾರಿಕೋಟ್ ಘುಂಡೈಯಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಈವಿಷ್ಣು ದೇವಸ್ಥಾನ ಪತ್ತೆಯಾಗಿದೆ. ಇದು1,300 ವರ್ಷ ಹಿಂದಿನ ಹಿಂದೂಶಾಹಿ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿದೆ. ಹಿಂದೂಶಾಹಿ ಅಥವಾ ಕಾಬುಲ್ ಶಾಹಿ (850–1026) ಎಂಬುದು ಹಿಂದೂ ರಾಜವಂಶವಾಗಿದ್ದು ಪೂರ್ವ ಅಫ್ಗಾನಿಸ್ತಾನ, ಗಾಂಧಾರ (ಇಂದಿನ ಪಾಕಿಸ್ತಾನ), ಹಾಗೂ ಭಾರತದ ವಾಯವ್ಯ ಭಾಗವು ಈ ರಾಜವಂಶದ ಆಡಳಿತಕ್ಕೆ ಒಳಪಟ್ಟಿತ್ತು’ ಎಂದು ಪಾಕಿಸ್ತಾನದ ಪುರಾತತ್ವ ಸಂಶೋಧನಾ ವಿಭಾಗ ತಿಳಿಸಿದೆ.
ದೇವಸ್ಥಾನದ ಸಮೀಪದಲ್ಲಿ ಪುಷ್ಕರಿಣಿ, ಸೇನಾ ನೆಲೆ ಹಾಗೂ ಕಾವಲು ಗೋಪುರಗಳು ಇದ್ದವು ಎಂಬುದೂ ಉತ್ಖನನದಿಂದ ತಿಳಿದುಬಂದಿದೆ.
ಸ್ವಾತ್ ಪ್ರದೇಶದಲ್ಲಿ ದೀರ್ಘ ಕಾಲದಿಂದ ಉತ್ಖನನ ನಡೆಯುತ್ತಿದೆ. ಆದರೆ ಇದೇ ಮೊದಲಬಾರಿಗೆ ಇಲ್ಲಿ ಹಿಂದೂಶಾಹಿ ರಾಜವಂಶಕ್ಕೆ ಸಂಬಂಧಿಸಿದ ಕುರುಹುಗಳು ಲಭ್ಯವಾಗಿವೆ. ಗಾಂಧಾರ ನಾಗರಿಕತೆಗೆ ಸಂಬಂಧಿಸಿದಂತೆ ಲಭ್ಯವಾದ ಮೊದಲ ದೇವಸ್ಥಾನ ಇದಾಗಿದೆ ಎಂದು ಪುರಾತತ್ವ ಸಂಶೋಧಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.