ADVERTISEMENT

ಖಾಸಗಿ ಮಾಹಿತಿ ಫೇಸ್‌ಬುಕ್‌ಗೆ ರವಾನೆ

ಜಾಹೀರಾತುದಾರರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ: ಆ್ಯಪ್‌ಗಳ ವಿರುದ್ಧ ಆರೋಪ:

ಏಜೆನ್ಸೀಸ್
Published 23 ಫೆಬ್ರುವರಿ 2019, 19:30 IST
Last Updated 23 ಫೆಬ್ರುವರಿ 2019, 19:30 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಬಳಕೆದಾರರಿಗೆ ತಿಳಿಸದೆಯೇ ಹಲವು ಸ್ಮಾರ್ಟ್‌ಫೋನ್‌ ಆ್ಯಪ್‌ಗಳು ಫೇಸ್‌ಬುಕ್‌ಗೆ ಖಾಸಗಿ ಮಾಹಿತಿಗಳನ್ನು ರವಾನಿಸುತ್ತಿವೆ ಎನ್ನುವುದು ಬಹಿರಂಗವಾಗಿದೆ.

ಋತುಚಕ್ರ, ದೇಹದ ತೂಕ, ಗರ್ಭಧಾರಣೆ, ಅಂಡೋತ್ಪತ್ತಿ ಮತ್ತು ಮನೆಯ ಶಾಪಿಂಗ್‌ ಮುಂತಾದ ವೈಯಕ್ತಿಕ ಮಾಹಿತಿಗಳು ಬಳಕೆದಾರರಿಗೆ ನೋಟಿಫಿಕೇಷನ್‌ ನೀಡದೆಯೇ ಫೇಸ್‌ಬುಕ್‌ಗೆ ರವಾನೆಯಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ಆ್ಯಪ್‌ ಬಳಕೆದಾರರು ಫೇಸ್‌ಬುಕ್‌ ಬಳಕೆದಾರರಾಗಿಲ್ಲದೇ ಇದ್ದರೂ, ಜಾಹೀರಾತು ಕಂಪನಿಗೆ ನೆರವಾಗುವ ಉದ್ದೇಶದಿಂದಖಾಸಗಿ ಮಾಹಿತಿಗಳು ಫೇಸ್‌ಬುಕ್‌ನಲ್ಲಿ ವಿನಿಮಯವಾಗುವಂತೆ ತಂತ್ರಜ್ಞಾನವನ್ನು ವಿನ್ಯಾಸ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

‘ಫೇಸ್‌ಬುಕ್‌ನಲ್ಲಿ ಆ್ಯಪ್‌ ಹಂಚಿಕೊಂಡಿರುವ ಮಾಹಿತಿಯ ಬಗ್ಗೆ ಅಪ್ಲಿಕೇಶನ್‌ ಡೆವಲಪರ್‌ಗಳ ಬಳಿ ಸ್ಪಷ್ಟನೆ ಪಡೆಯಲಾಗುವುದು. ಖಾಸಗಿ ಮಾಹಿತಿಗಳನ್ನು ಕಳುಹಿಸುವ ಆ್ಯಪ್‌ಗಳನ್ನು ನಿಷೇಧಿಸಲಾಗುವುದು’ ಎಂದು ಫೇಸ್‌ಬುಕ್‌ ವಕ್ತಾರ ನಿಸ್ಸಾ ಅಂಕ್ಲೆಸರಿಯಾ ತಿಳಿಸಿದ್ದಾರೆ.

‘ಈ ರೀತಿಯ ಮಾಹಿತಿಗಳನ್ನು ಪತ್ತೆ ಮಾಡಿ ಅದನ್ನು ಅಳಿಸಿ ಹಾಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಲಕ್ಷಾಂತರ ಮಂದಿ ಡೌನ್‌ಲೋಡ್‌ ಮಾಡಿಕೊಂಡಿರುವ ಹನ್ನೊಂದು ಜನಪ್ರಿಯ ಆ್ಯಪ್‌ಗಳು ಬಳಕೆದಾರರ ಖಾಸಗಿ ಮಾಹಿತಿಗಳನ್ನು ಫೇಸ್‌ಬುಕ್‌ಗೆ ರವಾನಿಸಿರುವುದು ತಿಳಿದು ಬಂದಿದೆ.

ವ್ಯವಹಾರ ನಿಯಮ ಉಲ್ಲಂಘಿಸಿ ಆ್ಯಪ್‌ವೊಂದು ಫೇಸ್‌ಬುಕ್‌ಗೆ ಮಾಹಿತಿ ರವಾನಿಸಿತ್ತು. ಆ್ಯಪ್‌ ತಯಾರಕರು ಆರೋಗ್ಯ, ಹಣಕಾಸು ಮತ್ತು ಇತರೆಸೂಕ್ಷ್ಮ ವಿಷಯಗಳ ಮಾಹಿತಿಗಳನ್ನು ಫೇಸ್‌ಬುಕ್‌ಗೆ ರವಾನಿಸದಂತೆ ಸೂಚಿಸಿದ್ದೆವು ಎಂದು ಕ್ಯಾಲಿಫೋರ್ನಿಯಾ ಮೂಲದ ಫೇಸ್‌ಬುಕ್‌ ತಿಳಿಸಿರುವುದಾಗಿವಾಲ್‌ಸ್ಟ್ರೀಟ್‌ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.