ADVERTISEMENT

ಕಾರ್ಲಸ್‌ ಘೋಸ್ನ್‌ ಪತ್ನಿ ಬಂಧನಕ್ಕೆ ಕೋರ್ಟ್ ಆದೇಶ

ಏಜೆನ್ಸೀಸ್
Published 7 ಜನವರಿ 2020, 18:15 IST
Last Updated 7 ಜನವರಿ 2020, 18:15 IST
ಕೆರೋಲ್‌ ಘೋಸ್ನ್‌
ಕೆರೋಲ್‌ ಘೋಸ್ನ್‌   

ಟೋಕಿಯೊ: ಹಣ ದುರ್ಬಳಕೆ ಪ್ರಕರಣಕ್ಕೆ ದೇಶ ಬಿಟ್ಟು ಪರಾರಿಯಾಗಿರುವ ಕಾರು ತಯಾರಿಕಾ ಸಂಸ್ಥೆ ‘ನಿಸಾನ್’ನ ಮಾಜಿ ಮುಖ್ಯಸ್ಥಕಾರ್ಲಸ್ ಘೋಸ್ನ್ ಅವರ ಪತ್ನಿ ಕರೋಲ್‌ ಘೋಸ್ನ್‌ ವಿರುದ್ಧ ಇಲ್ಲಿನ ನ್ಯಾಯಾಲಯ ಬಂಧನ ಆದೇಶ ಹೊರಡಿಸಿದೆ.

ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಪತಿ ಕಾರ್ಲಸ್‌ ಘೋಸ್ನ್‌ ಲೆಬನಾನ್‌ಗೆ ಪರಾರಿಯಾಗಿದ್ದರು. ಪತ್ನಿ ಕರೋಲ್ ಘೋಸ್ನ್‌ ಅವರು ಇದಕ್ಕೆ ಸಹಕರಿಸಿದ್ದರು. ಹೀಗಾಗಿ ಪತಿ ಜಾಮೀನು ಪಡೆಯಲು ಇರಿಸಿದ್ದ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವ ನ್ಯಾಯಾಲಯ ಕೂಡಲೇ ಕೆರೋಲ್‌ ಅವರನ್ನು ಬಂಧಿಸುವಂತೆ ವಾರಂಟ್‌ ಹೊರಡಿಸಿದೆ.

2019ರ ಏಪ್ರಿಲ್‌ನಲ್ಲಿ ಟೋಕಿಯೊ ಜಿಲ್ಲಾ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿಗಳನ್ನೂ ನೀಡಿದ್ದಾರೆ ಎಂದು ಕೋರ್ಟ್‌ ಹೇಳಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ಪತಿ ಕಾರ್ಲಸ್ ಘೋಸ್ನ್ ಕಳೆದ ಡಿಸೆಂಬರ್‌ನಲ್ಲಿ ಇಸ್ತಾಂಬುಲ್‌ಗೆ ಪರಾರಿಯಾಗಿದ್ದರು ಅಲ್ಲಿಂದ ಫ್ರೆಂಚ್‌ ಪಾಸ್‌ಪೋರ್ಟ್‌ ಬಳಸಿ ಖಾಸಗಿ ಜೆಟ್‌ ವಿಮಾನದಲ್ಲಿ ಲೆಬನಾನ್‌ಗೆ ತೆರಳಿದ್ದರು. ಆದಾಯ ಕುರಿತ ಮಾಹಿತಿಯನ್ನು ಮರೆಮಾಚಿರುವುದು, ಹಣದ ದುರ್ಬಳಕೆ ಸೇರಿದಂತೆ ಹಲವು ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.