ADVERTISEMENT

‘ಕಾಶ್ಮೀರ: ಆರ್ಥಿಕತೆ ಅಭಿವೃದ್ಧಿಪಡಿಸಿ, ತಾರತಮ್ಯ ಹೋಗಲಾಡಿಸಿ’

ಪಿಟಿಐ
Published 21 ಡಿಸೆಂಬರ್ 2019, 19:30 IST
Last Updated 21 ಡಿಸೆಂಬರ್ 2019, 19:30 IST
ನರೇಂದ್ರ ಮೋದಿ - ಅಮೆರಿಕದ ಸಂಸದ ಜೋ ವಿಲ್ಸನ್‌
ನರೇಂದ್ರ ಮೋದಿ - ಅಮೆರಿಕದ ಸಂಸದ ಜೋ ವಿಲ್ಸನ್‌   

ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದು, ಅಲ್ಲಿನ ಆರ್ಥಿಕ ಅಭಿವೃದ್ಧಿ, ಭ್ರಷ್ಟಾಚಾರ ವಿರುದ್ಧದ ಹೋರಾಟ ಮತ್ತು ಜಾತಿ ಹಾಗೂ ಧರ್ಮಗಳ ತಾರತಮ್ಯವನ್ನು ಕೊನೆಗಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ನಿರ್ಧಾರವನ್ನು ಬೆಂಬಲಿಸುವುದಾಗಿ ಅಮೆರಿಕದ ಸಂಸದ ಜೋ ವಿಲ್ಸನ್‌ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯನ್ನು ಆಗಸ್ಟ್‌ 5 ರಂದು ರದ್ದುಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲಾಗಿದೆ.

ಭಾರತದ ರಾಯಭಾರಿ ಹರ್ಷ ವರ್ಧನ್‌ ಶೃಂಗಲಾ ಅವರು ವಿಲ್ಸನ್‌ ಅವರಿಗೆ ಟ್ವೀಟ್‌ ಮೂಲಕ ಕೃತಜ್ಞತೆ ಸಲ್ಲಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ, ಸಾಮಾಜಿಕ ನ್ಯಾಯದ ಹೊಸ ಮಾದರಿ ಜಾರಿಗೆ ತರುವಲ್ಲಿ ಭಾರತ– ಅಮೆರಿಕ ಸಂಬಂಧ ಗಟ್ಟಿಯಾಗಲಿದೆ. ಭಾರತ ಕೈಗೊಂಡಿರುವ ಕ್ರಮಗಳಿಗೆ ಹೇಳಿಕೆ ಬಲವಾದ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಅಮೆರಿಕದ ಸಂಸತ್ತಿನಲ್ಲಿ ಗುರುವಾರ ಮಾತನಾಡಿದ ವಿಲ್ಸನ್‌, ಜಮ್ಮು ಮತ್ತು ಕಾಶ್ಮೀರ ಕುರಿತ ನಿರ್ಧಾರವನ್ನು ಬಹು ಪಕ್ಷಗಳ ಬೆಂಬಲದೊಂದಿಗೆ ಭಾರತ ಸರ್ಕಾರ ಕೈಗೊಂಡಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಮತ್ತು ತಾರತಮ್ಯ ನಿವಾರಣೆಗೆ ಮೋದಿ ಕೈಗೊಂಡಿರುವ ಪ್ರಯತ್ನಗಳಿಗೆ ಇದು ಬೆಂಬಲವಾಗಿದೆ’ ಎಂದು ಹೇಳಿದ್ದರು.

‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಯಶಸ್ವಿಯಾಗುತ್ತಿರುವುದನ್ನು ನೋಡಲು ಅಮೆರಿಕನ್ನರು ಕೃತಜ್ಞರಾಗಿರುತ್ತಾರೆ’ ಎಂದು ಅವರು ಹೇಳಿದ್ದಾರೆ.

ಹ್ಯೂಸ್ಟನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ಮೋದಿಯವರ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 52,000 ಜನರು ಭಾಗವಹಿಸಿದ್ದ ಈ ಕಾರ್ಯಕ್ರಮವು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡದಾಗಿದೆ ಎಂದು ವಿಲ್ಸನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.