ADVERTISEMENT

ಚೀನಾ: ವೈರಸ್‌ಗೆ 6 ಸಾವು, 300 ಮಂದಿಯಲ್ಲಿ ಸೋಂಕು

ಪಿಟಿಐ
Published 21 ಜನವರಿ 2020, 19:45 IST
Last Updated 21 ಜನವರಿ 2020, 19:45 IST
ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ಚೀನಾದಿಂದ ಬಂದ ಪ್ರವಾಸಿಗರ ತಪಾಸಣೆ ನಡೆಸಲಾಯಿತು. - -– ಪಿಟಿಐ ಚಿತ್ರ
ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಥರ್ಮಲ್‌ ಸ್ಕ್ಯಾನರ್‌ ಮೂಲಕ ಚೀನಾದಿಂದ ಬಂದ ಪ್ರವಾಸಿಗರ ತಪಾಸಣೆ ನಡೆಸಲಾಯಿತು. - -– ಪಿಟಿಐ ಚಿತ್ರ   

ಬೀಜಿಂಗ್‌/ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡಿರುವ ಸಾರ್ಸ್‌ ರೀತಿಯ ವೈರಸ್‌ ಸುಮಾರು 300 ಮಂದಿಯಲ್ಲಿ ಪತ್ತೆಯಾಗಿದ್ದು, ಆರು ಮಂದಿ ಸಾವಿಗೀಡಾಗಿದ್ದಾರೆ.

ಇದನ್ನು ಕೊರೊನಾವೈರಸ್ ಎಂದು ಗುರುತಿಸಲಾಗಿದ್ದು, ಜ್ವರ, ಕೆಮ್ಮು, ನ್ಯೂಮೋನಿಯಾ, ಉಸಿರಾಟದ ತೊಂದರೆಯಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ವುಹಾನ್‌ ನಗರದಲ್ಲಿ ಮೊದಲು ಪತ್ತೆಯಾಗಿದ್ದ ಈ ವೈರಸ್‌ ದೇಶದ ಇತರೆಡೆಯೂ ಹಬ್ಬುತ್ತಿದೆ. ಈ ವೈರಸ್‌ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ದೃಢಪಡಿಸಿದೆ. ಇದರಿಂದ, ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.

ADVERTISEMENT

ಹೊಸದಾಗಿ 80 ಪ್ರಕರಣಗಳು ದೃಢಪಟ್ಟಿವೆ. ಹುಬೈ ಪ್ರಾಂತ್ಯದ ವುಹಾನ್‌, ಬೀಜಿಂಗ್‌, ಶಾಂಘೈನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಚೀನಾ ಮತ್ತು ಹಾಂಗ್‌ಕಾಂಗ್‌ನಲ್ಲಿ 2002 ಮತ್ತು 2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‌ ವೈರಸ್‌ನಿಂದ ಸುಮಾರು 650 ಮಂದಿ ಸಾವಿಗೀಡಾಗಿದ್ದರು. ಇದೇ ರೀತಿಯ ಹೋಲಿಕೆಯನ್ನು ಈ ‘ಕೊರೊನಾವೈರಸ್’ ಹೊಂದಿರುವುದರಿಂದ ಆತಂಕ ಮೂಡಿದೆ.

ವೈರಸ್‌ ಕಾಣಿಸಿಕೊಂಡಿರುವವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವುಹಾನ್‌ ನಗರದಲ್ಲಿ ಪ್ರವಾಸಿಗರ ಮೇಲೆಯೂ ನಿರ್ಬಂಧ ಹೇರಲಾಗಿದೆ. ವಿಮಾನ, ರೈಲ್ವೆ ಮತ್ತು ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಕೈಗೊಳ್ಳಲಾಗುತ್ತಿದೆ.

ಥಾಯ್ಲೆಂಡ್‌, ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲೂ ವೈರಸ್‌ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ವೈರಸ್‌ ಹರಡದಂತೆ ಹಲವು ರಾಷ್ಟ್ರಗಳು ಮುಂಜಾಗ್ರತಾ ಕ್ರಮ ಕೈಗೊಂಡಿವೆ. ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ಎಚ್ಚರವಹಿಸಲಾಗಿದ್ದು, ಪ್ರಯಾಣಿಕರ ಸಮಗ್ರ ತಪಾಸಣೆ ಕೈಗೊಳ್ಳಲಾಗುತ್ತಿದೆ.

ಥಾಯ್ಲೆಂಡ್‌ನ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆಗೆ ವಿಶೇಷ ಸ್ಕ್ಯಾನಿಂಗ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಜ್ವರದ ಲಕ್ಷಣಗಳಿರುವ ವ್ಯಕ್ತಿಗಳನ್ನು 24 ಗಂಟೆಗಳ ಕಾಲ ಪ್ರತ್ಯೇಕವಾಗಿ ಇರಿಸಿ ನಿಗಾವಹಿಸಲಾಗುತ್ತಿದೆ. ಹಾಂಗ್‌ಕಾಂಗ್‌ನಲ್ಲಿ ಅತಿ ಹೆಚ್ಚು ಕಟ್ಟೆಚ್ಚರವಹಿಸಲಾಗಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ, ಸಿಂಗಪುರ ಮತ್ತು ಅಮೆರಿಕದಲ್ಲೂ ತಪಾಸಣೆ ಕ್ರಮಗಳನ್ನು ಹೆಚ್ಚಿಸಲಾಗಿದೆ.

ಫಿಲಿಪ್ಪಿನ್ಸ್‌, ಬಾಲಕನಿಗೆ ವೈರಸ್‌: ಫಿಲಿಪ್ಪಿನ್ಸ್‌ನಲ್ಲಿ ಕಾಣಿಸಿಕೊಂಡಿರುವ ಸಾರ್ಸ್‌ ರೀತಿಯ ವೈರಸ್‌ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ವೈರಸ್‌ ಕಾಣಿಸಿಕೊಂಡ ಚೀನಾದ ವುಹಾನ್‌ ನಗರದಿಂದ ಜನವರಿ 12ರಂದು ಫಿಲಿಪ್ಪಿನ್ಸ್‌ಗೆ ಬಂದಿರುವ ಐದು ವರ್ಷದ ಬಾಲಕನಲ್ಲಿ ವೈರಸ್ ಕಾಣಿಸಿಕೊಂಡಿದೆ. ಈತ ಜ್ವರದ ಲಕ್ಷಣಗಳಿಂದ ಬಳಲುತ್ತಿದ್ದಾನೆ. ಈ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಫ್ರಾನ್ಸಿಸ್ಕೊ ಡುಕ್ಯೂ ತಿಳಿಸಿದ್ದಾರೆ.

ಏನಿದು ಕೊರೊನೊ ವೈರಸ್‌?
ಕೊರೊನೊವೈರಸ್‌ ಪ್ರಾಣಿಗಳು ಮತ್ತು ಜನರ ನಡುವೆ ಹರಡುತ್ತದೆ. ಸೋಂಕು ಕಾಣಿಸಿಕೊಂಡ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಮತ್ತು ಸ್ಪರ್ಶಿಸಿದಾಗ ಇನ್ನೊಬ್ಬರಿಗೆ ಹರಡುತ್ತದೆ ಎಂದು ಅಮೆರಿಕದ ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ತಿಳಿಸಿದೆ.

ಭಾರತದಲ್ಲೂ ತಪಾಸಣೆ
ಭಾರತದಲ್ಲೂ ಚೀನಾದಿಂದ ಬರುವ ಪ್ರವಾಸಿಗರ ತಪಾಸಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಮುಂಬೈ ಮತ್ತು ಕೋಲ್ಕತ್ತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ಯಾನರ್‌ಗಳ ಮೂಲಕ ತಪಾಸಣೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.