ADVERTISEMENT

ಕೆನಡಾದಲ್ಲಿ ಶೂಟೌಟ್‌: ಮಹಿಳಾ ಪೊಲೀಸ್ ಸೇರಿ 10 ಜನರು ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 4:47 IST
Last Updated 20 ಏಪ್ರಿಲ್ 2020, 4:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೊರಾಂಟೊ: ಕೆನಡಾ ಪ್ರಾಂತ್ಯದ ನೋವಾ ಸ್ಕಾಟಿಯಾದ ಉತ್ತರ ಭಾಗದಲ್ಲಿ 51 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಗುಂಡಿನ ದಾಳಿ ನಡೆಸಿದ್ದು, ಮಹಿಳಾ ಪೊಲೀಸ್ ಸೇರಿದಂತೆ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ.

ಶೂಟರ್ ಸಹ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೌನ್‌ಟೌನ್ ಹ್ಯಾಲಿಫ್ಯಾಕ್ಸ್‌ನ ವಾಯುವ್ಯ ಭಾಗದ ನೋವಾ ಸ್ಕಾಟಿಯಾದ ಎನ್‌ಫೀಲ್ಡ್‌ನಲ್ಲಿರುವ ಗ್ಯಾಸ್‌ ಸ್ಟೇಷನ್‌ ಬಳಿ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಶಂಕಿತನ ಮೃತದೇಹವನ್ನು ಗುರುತಿಸಿದ್ದಾರೆ. ಶಂಕಿತನನ್ನು ಗೇಬ್ರಿಯಲ್ ವೋರ್ಟ್‌ಮನ್ ಎಂದು ಗುರುತಿಸಲಾಗಿದೆ.

10ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಆರ್‌ಸಿಎಂಪಿ ಮುಖ್ಯ ಅಧೀಕ್ಷಕ ಕ್ರಿಸ್ ಲೆದರ್ ತಿಳಿಸಿದ್ದಾರೆ. ಈ ಎಲ್ಲ ಹತ್ಯೆಗಳಿಗೂ ಓರ್ವ ವ್ಯಕ್ತಿ ಕಾರಣವಾಗಿದ್ದಾನೆ ಮತ್ತು ಆತ ಪ್ರಾಂತ್ಯದ ಉತ್ತರ ಭಾಗದಾದ್ಯಂತ ತೆರಳಿ ಶೂಟೌಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ADVERTISEMENT

ರಾಷ್ಟ್ರೀಯ ಪೊಲೀಸ್ ಫೆಡರೇಶನ್ ಯೂನಿಯನ್ ಅಧ್ಯಕ್ಷ ಬ್ರಿಯಾನ್ ಸಾವೆ, ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಪೊಲೀಸ್ ಅಧಿಕಾರಿಯೂ ಇದ್ದಾರೆ ಮತ್ತು ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಅಧಿಕಾರಿಯನ್ನು ಕಾನ್‌ಸ್ಟೆಬಲ್ ಹೈಡಿ ಸ್ಟೀವನ್ಸನ್ ಎಂದು ಗುರುತಿಸಲಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲೊಬ್ಬರು 23 ವರ್ಷದ ಸೇನಾಧಿಕಾರಿ ಎಂದು ಗುರುತಿಸಲಾಗಿದೆ.

ಮುಂಜಾನೆ ಘಟನಾ ಸ್ಥಳದಲ್ಲಿ ಆರು ಪೊಲೀಸ್ ವಾಹನಗಳು ನಿಂತಿದ್ದವು. ಗ್ಯಾಸ್‌ ಪಂಪ್‌ ಅನ್ನು ಪೊಲೀಸ್ ಟೇಪ್‌ನಿಂದ ನಿರ್ಬಂಧಿಸಲಾಗಿತ್ತು. ಅಲ್ಲಿದ್ದ ಎಸ್‌ಯುವಿಯನ್ನು ಸುತ್ತುವರಿದಿದ್ದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.